ಕನ್ನಡ ಕಿರುತೆರೆಯ ಹ್ಯಾಂಡಸಮ್ ಬಾಯ್ ಎಂದೇ ಹೆಸರಾದ ತ್ರಿವಿಕ್ರಮ್ 'ಪದ್ಮಾವತಿ' ಧಾರಾವಾಹಿ ವೇಳೆ ರಾಜ್ಯದ ಮನೆ ಮಾತಾಗಿದ್ದರು. ಇದೀಗ ತಾವು ಅಭಿನಯಿಸಿರುವ ಧಾರಾವಾಹಿ ಮರು ಪ್ರಸಾರವಾಗುತ್ತಿರುವುದಕ್ಕೆ ಅವರು ಬಹಳ ಖುಷಿ ವ್ಯಕ್ತಪಡಿಸಿದ್ದಾರೆ.
ಮೂರು ವರ್ಷಗಳ ಕಾಲ ವಿಭಿನ್ನ ಕಥಾ ಹಂದರದ ಮೂಲಕ ಪ್ರೇಕ್ಷಕರನ್ನು ಸೆಳೆದ 'ಪದ್ಮಾವತಿ' ಧಾರಾವಾಹಿಯ ಸುಂದರ ಅನುಭವವನ್ನು ತ್ರಿವಿಕ್ರಮ್ ಹಂಚಿಕೊಂಡಿದ್ದಾರೆ. 'ಬಣ್ಣದ ಲೋಕದಲ್ಲಿ ನಾನು ಗುರುತಿಸಿಕೊಳ್ಳಬೇಕು ಎಂದು ಕಾಯುತ್ತಿದ್ದೆ. ಆ ಸಮಯದಲ್ಲಿ ನನಗೆ 'ಪದ್ಮಾವತಿ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರೆಯಿತು. ಅದು ನನ್ನ ಅದೃಷ್ಟವೇ ಸರಿ. ಏಕೆಂದರೆ ಆ ಪಾತ್ರಕ್ಕೆ 1000 ಜನರ ಆಡಿಷನ್ ಕೂಡಾ ನಡೆದಿತ್ತು. ಆದರೆ ಆಯ್ಕೆಯಾಗಿದ್ದು ನಾನು. ಒಂದರ್ಥದಲ್ಲಿ ಹೇಳಬೇಕೆಂದರೆ ನಾನು ಇಂದು ನಟನಾ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಸತ್ಯ ಮತ್ತು ನಿರ್ಮಲಾ ಅವರೇ ಮೂಲ ಕಾರಣ' ಎಂದು ಹೇಳಿಕೊಂಡಿದ್ದಾರೆ ತ್ರಿವಿಕ್ರಮ್.
ತ್ರಿವಿಕ್ರಮ್ ಹಾಗೂ ಸಾಮ್ರಾಟ್ ಪಾತ್ರಕ್ಕೆ ವ್ಯತ್ಯಾಸ ಇಲ್ಲ , ಸಾಮ್ರಾಟ್ನಂತೆ ನಿಜಜೀವನದಲ್ಲಿ ನಾನು ಅಮ್ಮನ ಮಗ , ತಂಗಿಯನ್ನು ತುಂಬಾ ಪ್ರೀತಿಸುವೆ ಎಂದು ಹೇಳುವ ತ್ರಿವಿಕ್ರಮ್, 'ಪದ್ಮಾವತಿ' ಧಾರಾವಾಹಿಯ ಪಯಣ ನಿಜಕ್ಕೂ ತುಂಬಾ ಸುಂದರವಾಗಿತ್ತು. ಉತ್ತಮ ಕಲಾವಿದರೊಡನೆ ತೆರೆ ಹಂಚಿಕೊಂಡಿದ್ದಕ್ಕೆ ನನಗೆ ಬಹಳ ಸಂತೋಷವಿದೆ. ಮಾತ್ರವಲ್ಲ, ನಾನು ಅವರಿಂದ ತುಂಬಾ ವಿಚಾರಗಳನ್ನು ಕಲಿತೆ ಎಂದು 'ಪದ್ಮಾವತಿ' ಪಾತ್ರದ ಬಗ್ಗೆ ಹೇಳುತ್ತಾರೆ ಈ ಸ್ಪುರದ್ರೂಪಿ ನಟ.
ತ್ರಿವಿಕ್ರಮ್ ಇಂದು ಎಲ್ಲಿ ಹೋದರೂ ಜನರು ಅವರನ್ನು ಗುರುತಿಸುವುದು ಸಾಮ್ರಾಟ್ ಆಗಿ. ಅಷ್ಟರ ಮಟ್ಟಿಗೆ ಅವರ ಪಾತ್ರ ಜನರನ್ನು ಮೋಡಿ ಮಾಡಿಬಿಟ್ಟಿದೆ. ಕಲಾವಿದ ಆದವನಿಗೆ ಇದಕ್ಕಿಂತ ಖುಷಿಯ ವಿಚಾರ ಬೇರೇನಿದೆ ಎನ್ನುತ್ತಾರೆ ತ್ರಿವಿಕ್ರಮ್.