'ವೀಕೆಂಡ್ ವಿಥ್ ರಮೇಶ್' ಈ ವಾರದ ಅತಿಥಿಯಾಗಿ ಯಾರು ಬರಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ ಬಿದ್ದಿದೆ. ದೊಡ್ಮನೆ ಮಗ ರಾಘವೇಂದ್ರ ರಾಜ್ ಕುಮಾರ್ ಈ ಶನಿವಾರ ಸಾಧಕರ ಸೀಟ್ನಲ್ಲಿ ಕುಳಿತುಕೊಳ್ಳಲಿದ್ದಾರೆ.
ಈಗಾಗಲೇ ರಾಜ್ ಕುಟುಂಬದಿಂದ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಶಿವಣ್ಣ ಹಾಗೂ ಅಪ್ಪು ಅತಿಥಿಗಳಾಗಿ ಬಂದಿದ್ದಾರೆ. ಇದೀಗ ರಾಘಣ್ಣನ ಸರದಿ. ನಟ ರಮೇಶ್ ಅರವಿಂದ್ ಅವರ ನಿರೂಪಣೆಯ ಈ ಕಾರ್ಯಕ್ರಮದಲ್ಲಿ ರಾಘಣ್ಣ, ತಮ್ಮ ಜೀವನದ ಸಂತೋಷ ಹಾಗೂ ದುಃಖದ ಕ್ಷಣಗಳನ್ನು ಎಲ್ಲರೆದುರು ತೆರೆದಿಡಲಿದ್ದಾರೆ. ತಮ್ಮ ಬಾಲ್ಯ, ತಂದೆಯೊಂದಿಗಿನ ಒಡನಾಟ, ಅಣ್ಣ ತಮ್ಮಂದಿರ ಸಂಬಂಧ, ಹೆಂಡತಿ ಪ್ರೀತಿ, ತಾಯಿ ಮಮತೆ, ಮಕ್ಕಳು, ಸಂಬಂಧಿಕರು, ಸ್ನೇಹಿತರ ಬಗ್ಗೆ ರಾಘಣ್ಣ ನೆನಪಿನ ಬುತ್ತಿ ಬಿಚ್ಚಿಡಲಿದ್ದಾರೆ.
ಅನಾರೋಗ್ಯದ ಸಂದರ್ಭದಲ್ಲಿ ತಮಗೆ ಮರುಜನ್ಮ ನೀಡಿದ ವೈದ್ಯರಿಗೆ ಕಾಲಿಗೆ ಬಿದ್ದು ನಮಸ್ಕರಿಸುವಂತಹ ಕ್ಷಣ, ಅಣ್ಣ ಶಿವಣ್ಣ ಒಂದು ತಿಂಗಳ ಕಾಲ ಮಗುವಿನಂತೆ ನೋಡಿಕೊಂಡಿದ್ದು ಹೀಗೆ.. ಹತ್ತು ಹಲವು ವಿಷಯಗಳು ಈ ವಾರ ವೀಕೆಂಡ್ ಟೆಂಟ್ನಲ್ಲಿ ಹೊರ ಬರಲಿವೆ.
ಈಗಾಗಲೇ ಈ ಎಪಿಸೋಡ್ ಚಿತ್ರೀಕರಣ ಮುಗಿದಿದ್ದು,ಇವೆಲ್ಲವೂ ಶನಿವಾರ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.