ಕೊರೊನಾ ವೈರಸ್ ಅನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಕಿರುತೆರೆ ನಟ ಪವನ್ ಕುಮಾರ್ ಮನವಿ ಮಾಡಿದ್ದಾರೆ.
ಗಟ್ಟಿಮೇಳ ಧಾರಾವಾಹಿ ನಟ ಪವನ್ ಕುಮಾರ್ ಅವರು ಕೋವಿಡ್‌ನಿಂದಾಗಿ ತಮ್ಮ ಬಾವ ಹಾಗೂ ಭಾವನ ತಂದೆಯನ್ನು ಕೇವಲ ಎರಡು ದಿನಗಳ ಅಂತರದಲ್ಲಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಮಾಹಿತಿ ನೀಡಿರುವ ಪವನ್, 'ಸರ್ಕಾರ ಜನರನ್ನು ಸಾಮೂಹಿಕವಾಗಿ ಕೊಲೆ ಮಾಡುತ್ತಿದೆ' ಎಂದು ಕಿಡಿಕಾರಿದ್ದಾರೆ. ಕೋವಿಡ್ ಸೋಂಕಿತರಾಗಿದ್ದ ಪವನ್ ಅವರ ಬಾವಗೆ ಸೂಕ್ತ ಸಮಯಕ್ಕೆ ಆಮ್ಲಜನಕ ಸಿಗದೆ ಸಾವನ್ನಪ್ಪಿದ್ದಾರೆ. ಬಾವನವರ ತಂದೆ ಕೂಡ ಕೋವಿಡ್‌ನಿಂದಾಗಿಯೇ ಮೃತಪಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಮ ಮಂದಿರ, ಹೊಸ ಪಾರ್ಲಿಮೆಂಟ್, ಎತ್ತರದ ಪ್ರತಿಮೆಗಳು ಇವುಗಳೆಲ್ಲ ನಮ್ಮಂಥಹವರ ಹೆಣಗಳ ಮೇಲೆ ಕಟ್ಟಲಾಗ್ತಿದೆ ಎನಿಸುತ್ತಿದೆ. ಇದನ್ನೆಲ್ಲಾ ನೆನಪಿಸಿಕೊಂಡರೆ ಮೈಯೆಲ್ಲಾ ಉರಿಯುತ್ತಿದೆ. ಸೂಕ್ತವಾದ ವ್ಯವಸ್ಥೆ ಇಲ್ಲದೆ ಈ ಮಹಾಮಾರಿಯನ್ನು ಸೋಲಿಸಲು ಸಾಧ್ಯವೇ ಇಲ್ಲ. ವೈದ್ಯಕೀಯ ಸಿಬ್ಬಂದಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ವ್ಯವಸ್ಥೆಯೇ ಸರಿಯಿಲ್ಲದಿರುವಾಗ ರೋಗಿಗಳು ಹೆಚ್ಚಾಗುತ್ತಲೇ ಇರುತ್ತಾರೆ. ಸರ್ಕಾರ ಸೂಕ್ತವಾಗಿ ಪ್ಯಾಂಡಮಿಕ್ ಮ್ಯಾನೇಜ್ ಮಾಡಬೇಕಿದೆ' ಎಂದು ಒತ್ತಾಯಿಸಿದ್ದಾರೆ.
ನಾನು ಕಣ್ಣಾರೆ ನೋಡಿದ್ದೇನೆ. ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲ, ಆಮ್ಲಜನಕವಿಲ್ಲ. ಆ್ಯಂಬುಲೆನ್ಸ್‌ಗಳಲ್ಲಿ ರೋಗಿಗಳನ್ನು ಇಟ್ಟುಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ತಿರುಗುತ್ತಿದ್ದಾರೆ. ಸ್ವತಃ ನಾನೇ ಬಾವನಿಗೆ ಆಮ್ಲಜನಕ ಹೊಂದಿಸಲು ರಾತ್ರಿಯೆಲ್ಲ ಬೀದಿಗಳಲ್ಲಿ ಅಲೆದಿದ್ದೇನೆ. ಸರ್ಕಾರ ಸರಿಯಾಗಿ ಮುನ್ನೆಚ್ಚರಿಕೆ ವಹಿಸಿದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ. ನಮ್ಮ ಬಾವ ಬದುಕಿರುತ್ತಿದ್ದರು ಎಂದು ನೋವು ತೋಡಿಕೊಂಡಿದ್ದಾರೆ.
ಒಂದೇ ದಿನ 6 ಸಾವುಗಳನ್ನು ನಾನು ನೋಡಿದೆ. ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಪರಿಸ್ಥಿತಿ ಕೈಮೀರಿ ಹೋಗಿದೆ. ಆಸ್ಪತ್ರೆ ಒಂದು ಬೆಡ್‌ಗಾಗಿ, ಒಂದು ಆಮ್ಲಜನಕದ ಸಿಲಿಂಡರ್‌ಗಾಗಿ ಜನರು ಕಾಲುಗಳನ್ನು ಹಿಡಿಯುತ್ತಿದ್ದಾರೆ. ದಯವಿಟ್ಟು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಿ. ಯಾರೂ ಮನೆಯಿಂದ ಹೊರಗೆ ಹೋಗಬೇಡಿ ಎಂದು ಪವನ್ ಮನವಿ ಮಾಡಿದ್ದಾರೆ.
ಓದಿ: ಫಿಟ್ ಆಗಲು ಜಿಮ್ಗೆ ಹೋಗಲೇಬೇಕು ಎಂದೇನಿಲ್ಲ....ಪವನ್ ಫಿಟ್ನೆಸ್ ಮಂತ್ರ