ಹಿರಿಯ ಖ್ಯಾತ ನಟರು ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದು, ಇದೀಗ ಆ ಸಾಲಿಗೆ ಮಂಡ್ಯ ರಮೇಶ್ ಸೇರಿದ್ದಾರೆ. ಉದಯ ವಾಹಿನಿಯ 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ಮಂಡ್ಯ ರಮೇಶ್ ವಯೋವೃದ್ಧನ ಲುಕ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ.

ಕಾವ್ಯಾಂಜಲಿ ಧಾರಾವಾಹಿ ಈಗಾಗಲೇ 300 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಹೊಸತನವನ್ನು ಅಳವಡಿಸಿಕೊಳ್ಳಲು ಸಜ್ಜಾಗಿದೆ. ರೊಮ್ಯಾಂಟಿಕ್ ಧಾರಾವಾಹಿಯಾದರೂ ಅನೇಕ ಸಂಬಂಧಗಳನ್ನು ಭಾವನಾತ್ಮಕವಾಗಿ ಬೆಸೆದುಕೊಂಡು ಜನಮನ ಗೆದ್ದಿತ್ತು. ಈಗ ಹೊಸ ಪ್ರಾರಂಭಕ್ಕೆ ಮುನ್ನುಡಿಯಿಟ್ಟಿರುವ ಕಾವ್ಯಾಂಜಲಿಯಲ್ಲಿ ಪ್ರೀತಿ ಮುಂಗಾರು ಎಂಬ ಪ್ಯಾಕೇಜ್ ಮೂಲಕ ಮನರಂಜಿಸಲು ಹೊರಟಿದೆ. ಈ ತಂಡಕ್ಕೆ ಮಂಡ್ಯ ರಮೇಶ್ ಸೇರಿದ್ದು, ಇಲ್ಲಿ ಅವರು ಹಿಂದೆಂದೂ ಮಾಡದಂತಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗ ಕಥೆಯ ಪ್ರಮುಖ ಪಾತ್ರಧಾರಿ ಸುಶಾಂತ್ ಜನ್ಮರಹಸ್ಯವನ್ನು ಭೇದಿಸೋಕೆ ನಾಯಕಿ ಅಂಜಲಿ ಪಣ ತೊಟ್ಟು ಗಂಡನ ಜೊತೆ ಮಡಿಕೇರಿಗೆ ಪಯಣ ಬೆಳೆಸಿದ್ದಾಳೆ. ಸ್ನೇಹಕ್ಕೆ ಕಟ್ಟು ಬಿದ್ದು ಸುಶಾಂತ್ ಕೈ ಹಿಡಿದ ಅಂಜಲಿ, ಮುಂಗಾರಿನ ಚಳಿಯಲ್ಲಿ ಸುಶಾಂತ್ ಮೇಲೆ ಪ್ರೀತಿಯ ಹೂಮಳೆಗರೆಯಲು ತಯಾರಾಗಿದ್ದಾಳೆ. ಈ ನಡುವೆ ಅವರಿಬ್ಬರ ಕೊಂಡಿಯಾಗಿ ಮಂಡ್ಯ ರಮೇಶ್ ಕಾಣಿಸಿಕೊಳ್ಳಲಿದ್ದಾರೆ.
ವೃದ್ಧಾಪ್ಯದ ಅಂಚಿನಲ್ಲಿ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿರುವ ಕಾರ್ಯಪ್ಪ ಪಾತ್ರಧಾರಿ ಮಂಡ್ಯ ರಮೇಶ್ ವೃತ್ತಿಯಿಂದ ಒಬ್ಬ ಫೋಟೋಗ್ರಾಫರ್ ಆಗಿರುತ್ತಾರೆ. ಕಥೆಯಲ್ಲಿ ಅಂಜಲಿ ಹುಡುಕುತ್ತಿರುವ ಫೋಟೋವೊಂದರ ಹಿನ್ನೆಲೆಯನ್ನು ಪರಿಚಯಿಸೋದು ಇದೇ ಕಾರ್ಯಪ್ಪ. ಹಾಗಾಗಿ ಅವರ ಪಾತ್ರ ಒಂದು ರೀತಿಯಲ್ಲಿ ಕುತೂಹಲಭರಿತವಾಗಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.