ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನೆದೇವ್ರು' ಧಾರಾವಾಹಿಯಲ್ಲಿ ನಾಯಕ ಸೂರ್ಯ ಆಗಿ ಅಭಿನಯಿಸಿದ್ದ ಜಯ್ ಡಿಸೋಜ ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಪವಿತ್ರ ಬಂಧನಮ್ ಧಾರಾವಾಹಿ ಮೂಲಕ ತೆಲುಗು ಕಿರುತೆರೆಗೆ ಕಾಲಿಟ್ಟ ಜಯ್ ಡಿಸೋಜ ಮತ್ತೊಂದು ಹೊಸ ತೆಲುಗು ಧಾರಾವಾಹಿಯಲ್ಲಿ ನಟಿಸಲಿದ್ದಾರೆ.
![Actor Jay D Souza](https://etvbharatimages.akamaized.net/etvbharat/prod-images/kn-bng-02-jaydisoza-telugu-photo-ka10018_10102020123847_1010f_1602313727_874.jpg)
ಎಲ್ಲವೂ ಅಂದುಕೊಂಡಂತೆ ಸುಸೂತ್ರವಾಗಿ ಸಾಗಿದ್ದರೆ ಜಯ್ ಇಂದು ಪೈಲೆಟ್ ಆಗಿ ಆಗಸದಲ್ಲಿ ಹಾರಾಡುತ್ತಿದ್ದರು. ಇಂಜಿನಿಯರಿಂಗ್ ಪದವಿ ಪಡೆದಿರುವ ಜಯ್ ಅವರನ್ನು ಮಾಡೆಲಿಂಗ್ ಲೋಕ ಕೈ ಬೀಸಿ ಕರೆಯಿತು. ಮಾಡೆಲಿಂಗ್ ಕ್ಷೇತ್ರದಲ್ಲಿ ಒಂದಷ್ಟು ರ್‍ಯಾಂಪ್ ವಾಕ್ ಮಾಡಿದ್ದ ಜಯ್ ಕೆಲವೊಂದು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದರು. ನಂತರ ಮಾಡೆಲಿಂಗ್ನಿಂದ ನಟನಾ ಕ್ಷೇತ್ರಕ್ಕೆ ಬರುವ ಆಲೋಚನೆ ಮಾಡಿದ ಜಯ್ ಮುಂಬೈಗೆ ಹೋದರು. ಅಲ್ಲಿ ಅನುಪಮ್ ಖೇರ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ನಟನೆಯ ತರಬೇತಿ ಪಡೆದು ಮತ್ತೆ ಹಿಂತಿರುಗಿದ ಜಯ್, ಎಲ್ಲಾ ಆಡಿಶನ್ಗಳಿಗೆ ಮಿಸ್ ಮಾಡದೆ ಹೋಗುತ್ತಿದ್ದರು. ಕೊನೆಗೂ ಅವರ ಪ್ರಯತ್ನಕ್ಕೆ ಫಲ ದೊರಕಿತು.
![Actor Jay D Souza](https://etvbharatimages.akamaized.net/etvbharat/prod-images/kn-bng-02-jaydisoza-telugu-photo-ka10018_10102020123847_1010f_1602313727_927.jpg)
'ಮನೆದೇವ್ರು' ಧಾರಾವಾಹಿ ಜಯ್ ಬಣ್ಣದ ಬದುಕಿಗೆ ಮುನ್ನುಡಿ ಬರೆಯಿತು. ಜಯ್ ಇಂದು ನಟನಾ ಲೋಕದಲ್ಲಿ ಹೆಸರು ಮಾಡಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ಮನೆದೇವ್ರು ಧಾರಾವಾಹಿ. "ಇಂದು ನಾನು ನಟನಾಗಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಮೂಲ ಕಾರಣ ಮನೆದೇವ್ರು ಧಾರಾವಾಹಿ. ಬಯಸದೆ ಬಂದ ಅವಕಾಶವನ್ನು ಬೇಡ ಎನ್ನದೇ ನಟಿಸಲು ಒಪ್ಪಿಕೊಂಡೆ. ಅದೇ ನನ್ನ ಬಣ್ಣದ ಬದುಕಿಗೆ ನಾಂದಿಯಾಯತು. ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದೇನೆ. ಉತ್ತಮ ಅವಕಾಶ ದೊರೆತರೆ ಮತ್ತೆ ಕನ್ನಡ ಕಿರುತೆರೆಗೆ ಮರಳಿ ಬರುತ್ತೇನೆ" ಎಂದು ಹೇಳುತ್ತಾರೆ ಜಯ್ ಡಿಸೋಜ.
![Actor Jay D Souza](https://etvbharatimages.akamaized.net/etvbharat/prod-images/kn-bng-02-jaydisoza-telugu-photo-ka10018_10102020123847_1010f_1602313727_466.jpg)
ಜಯ್ ಪರಭಾಷೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರೂ ಮನೆದೇವ್ರು ಧಾರಾವಾಹಿಯ ಸೂರ್ಯ ಆಗಿ ಇಂದಿಗೂ ಕನ್ನಡ ಕಿರುತೆರೆಯಲ್ಲಿ ಪರಿಚಿತ. ರಾಗ, ಹ್ಯಾಪಿ ನ್ಯೂ ಇಯರ್ ಸಿನಿಮಾಗಳಲ್ಲಿ ಕೂಡಾ ಜಯ್ ನಟಿಸಿದ್ದಾರೆ. ಬಿಗ್ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಜಯ್ ಭಾಗವಹಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಕಾರಣಾಂತರಗಳಿಂದ ಹೋಗಲಾಗಲಿಲ್ಲ.
![Actor Jay D Souza](https://etvbharatimages.akamaized.net/etvbharat/prod-images/9122144_640_9122144_1602323681467.png)
"ನನಗೆ ಬಿಗ್ಬಾಸ್ನಲ್ಲಿ ಭಾಗವಹಿಸುವ ಅವಕಾಶ ದೊರಕಿದ್ದು ಸುಳ್ಳಲ್ಲ. ಆದರೆ ಆ ಸಮಯದಲ್ಲಿ ನಾನು ಎರಡು ತೆಲುಗು ಸೀರಿಯಲ್‌ಗಳನ್ನು ಮಾಡುತ್ತಿದ್ದೆ. ಇದರ ಜೊತೆಗೆ ತಮಿಳು ಸಿನಿಮಾವೊಂದರಲ್ಲೂ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಈ ಪ್ರಾಜೆಕ್ಟ್ಗಳ ಸಲುವಾಗಿ ದೊಡ್ಮನೆಗೆ ಹೋಗಲು ಸಾಧ್ಯವಾಗಲಿಲ್ಲ" ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಅನುಕೂಲವಾದರೆ ಜಯ್ ದೊಡ್ಮನೆ ಸ್ಪರ್ಧಿಯಾಗಿ ಕಾಣಿಸಿಕೊಂಡರೆ ಅಚ್ಚರಿಯೇನಿಲ್ಲ.