ಕೋವಿಡ್ 19 ಹಿನ್ನೆಲೆ ಕಳೆದ ಐದು ತಿಂಗಳಿನಿಂದ ಜಿಮ್ ಗಳು ಬಂದ್ ಆಗಿದ್ದು, ಆದಷ್ಟು ಬೇಗ ಜಿಮ್ ತೆರೆದರೆ ಸಾಕು ಎಂದು ಕಾಯುತ್ತಿದ್ದ ಹಲವರಿಗೆ ಇದೀಗ ಕೇಂದ್ರ ಸರ್ಕಾರ ಜಿಮ್ ತೆರೆಯಲು ಅನುಮತಿ ನೀಡಿದೆ. ಈ ಕುರಿತು ಕಿರುತೆರೆ ನಟ ಅರ್ಜುನ್ ಯೋಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಜಿಮ್ ಓಪನ್ ಆಗುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ಯಾವಾಗ ಜಿಮ್ ಓಪನ್ ಆಗುತ್ತದೋ, ಯಾವಾಗ ಹೋಗಿ ವರ್ಕ್ ಔಟ್ ಮಾಡುತ್ತೇವೆ ಎಂದು ಕಾಯುತ್ತಿದ್ದವರಿಗಂತೂ ಇದು ಸಿಹಿ ಸುದ್ದಿ. ಅದರಲ್ಲೂ ಜಿಮ್ ಮಾಲೀಕರು, ತರಬೇತುದಾರರಿಗೆ ನಿಜವಾಗಿಯು ಸಂತಸ ನೀಡುವ ವಿಷಯ. ಇಷ್ಟು ದಿನ ಕಳೆಗುಂದಿದ ಅವರ ಬ್ಯುಸಿನೆಸ್ ಇನ್ನುಮುಂದೆ ಉತ್ತಮವಾಗಿ ಸಾಗಲಿದೆ ಎಂದಿದ್ದಾರೆ.
ಸುದೀರ್ಘ ಸಮಯದ ನಂತರ ಮತ್ತೆ ಜಿಮ್ ಗೆ ಹೋಗುತ್ತಿರುವುದು ಖುಷಿ ತಂದಿದೆ. ಅಂದ ಹಾಗೆ ನಾನು ಜಿಮ್ ಗೆ ಹೋಗುವುದನ್ನು ಸೋಮವಾರದಿಂದ ಆರಂಭಿಸುತ್ತಿದ್ದೇನೆ. ಜಿಮ್ ಮಾರ್ಗದರ್ಶಕರು ಹಾಗೂ ಗೆಳೆಯರನ್ನು ಭೇಟಿಯಾಗಲು ಕಾಯುತ್ತಿರುವೆ ಎಂದು ಅರ್ಜುನ್ ತಿಳಿಸಿದ್ದಾರೆ.
ನಟನೆಗೆ ದೇಹದ ಆಕಾರವು ಕೂಡ ಮುಖ್ಯ. ಕೆಲವು ಪಾತ್ರಕ್ಕೆ ಜಾಸ್ತಿ ತೂಕ ಬೇಕಾದರೆ, ಇನ್ನು ಕೆಲವು ಪಾತ್ರಕ್ಕೆ ತೂಕ ಕಡಿಮೆ ಬೇಕಾಗುತ್ತದೆ. ಅದಕ್ಕಾಗಿ ವರ್ಕ್ ಔಟ್ ಮಾಡುವುದು ಅನಿವಾರ್ಯ. ಮಾರ್ಗದರ್ಶಕರ ಸಹಾಯದಿಂದ ದೇಹ ದಂಡಿಸುವುದು ಸೂಕ್ತ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.