ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಹಾರರ್ ಸಿನಿಮಾಗಳು ತಯಾರಾಗುತ್ತಿವೆ. ಇಂದಿಗೂ ಹಾರರ್ ಸಿನಿಮಾಗಳ ನಿರ್ಮಾಣ ಮುಂದುವರೆದಿದೆ. ಇದೀಗ 'ಕಪಟನಾಟಕ ಸೂತ್ರಧಾರಿ' ಕೂಡಾ ಈ ಲಿಸ್ಟ್ಗೆ ಸೇರಿದೆ. ಈ ಸಿನಿಮಾ ನಿಜಕ್ಕೂ ಒಂದು ಹೊಸ ಅನುಭವ ನೀಡುತ್ತದೆ. ಚಿತ್ರದಲ್ಲಿ ನಾಯಕನ ಮುಖಾಂತರ ಒಂದು ಆತ್ಮ ತನಗೆ ಅನ್ಯಾಯ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತದೆ.
ಅಮಾಯಕ ಆಟೋ ರಿಕ್ಷಾ ಚಾಲಕನ ಜೀವನದಲ್ಲಿ ನಡೆಯುವ ಕೆಲವೊಂದು ಸನ್ನಿವೇಶಗಳನ್ನು ಈ ಚಿತ್ರದಲ್ಲಿ ಹಾರರ್ ಮುಖಾಂತರ ತೋರಿಸಲಾಗಿದೆ. ಚಿತ್ರದ ಕಥಾನಾಯಕ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಏನೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾನೆ ಎಂಬುದು ಚಿತ್ರದ ಕಥಾವಸ್ತು. ನಾಯಕ ಈ ಚಿತ್ರದಲ್ಲಿ ಓರ್ವ ಆಟೋಚಾಲಕ. ಈತನ ಆಟೋದಲ್ಲಿ ಪ್ರಯಾಣಿಸುವ ಮೂವರು ವ್ಯಕ್ತಿಗಳು ಕಾಣೆ ಆಗುತ್ತಾರೆ. ಇನ್ನೊಂದು ವಿಚಿತ್ರ ಅಂದ್ರೆ ನಾಯಕಿ ರುಕ್ಕು, ಕೇವಲ ನಾಯಕ ಕೃಷ್ಣನ ಕಣ್ಣಿಗೆ ಮಾತ್ರ ಕಾಣಿಸಿಕೊಳ್ಳುವುದು, ಇದೆಲ್ಲಾ ಭ್ರಮೆ ಎನಿಸಿದರೂ ಮುಂದೆ ಚಿತ್ರ ಒಂದು ತಿರುವು ಪಡೆದುಕೊಳ್ಳುತ್ತದೆ. ಮುಂದೆ ಏನು ಜರುಗಲಿದೆ ಎಂದು ಪ್ರೇಕ್ಷಕ ತನಗೆ ತಿಳಿದುಹೋಯಿತು ಎಂದುಕೊಳ್ಳುತ್ತಿರುವಾಗಲೇ ನಿರ್ದೇಶಕ ಕ್ರಿಶ್ ಚಿತ್ರಕ್ಕೆ ಟ್ವಿಸ್ಟ್ ಕೊಡುತ್ತಾರೆ. ಇವೆಲ್ಲವನ್ನೂ ನೀವು ಥಿಯೇಟರ್ನಲ್ಲೇ ಬಂದು ನೋಡಬೇಕು.
ಇದು ಬಾಲು ನಾಗೇಂದ್ರ ವೃತ್ತಿ ಜೀವನದಲ್ಲಿ ವಿಭಿನ್ನ ಪಾತ್ರದ ಸಿನಿಮಾ ಎನ್ನಬಹುದು. ಇನ್ನು ನಾಯಕಿ ಸಂಗೀತ ಭಟ್ಗೆ ಚಿತ್ರದಲ್ಲಿ ಹೆಚ್ಚಿಗೆ ಕೆಲಸ ಇಲ್ಲ. ಕರಿ ಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್ ತುಮ್ಮುನಾಡು, ಉಗ್ರಮ್ ಮಂಜು, ಜಯದೇವ, ನವೀನ್ ವಾಸುದೇವ್, ಸುನಿಲ್ ಕುಲಕರ್ಣಿ ಅಚ್ಚುಕಟ್ಟಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ಎರಡು ಹಾಡುಗಳು ಕೇಳಲು ಚೆಂದ. ಪರಮೇಶ್ ಅವರ ಛಾಯಾಗ್ರಹಣ ಕೂಡಾ ಓಕೆ. ಚಿತ್ರದ ದ್ವಿತೀಯಾರ್ಧ ಬಿಗಿಯಾಗಿದೆ. ಒಮ್ಮೆ ಸಿನಿಮಾವನ್ನು ನೋಡಬಹುದು.