'ಹಳ್ಳಿಮೇಷ್ಟ್ರು' ಸಿನಿಮಾ ಎಂದರೆ ನೆನಪಾಗುವುದು ಸಿಲ್ಕ್ ಸ್ಮಿತಾ. ನಾಯಕಿಯಾಗಲು ಚಿತ್ರರಂಗಕ್ಕೆ ಬಂದ ಸಿಲ್ಕ್ ಸ್ಮಿತಾ ಆಗಿದ್ದು ಮಾತ್ರ ಡ್ಯಾನ್ಸರ್. ತನಗೆ ಬಂದ ಅವಕಾಶಗಳನ್ನು ಒಪ್ಪಿಕೊಳ್ಳದೆ ಆಕೆಗೆ ಬೇರೆ ದಾರಿ ಇರಲಿಲ್ಲ. ಆದರೂ ಆಕೆ ಡ್ಯಾನ್ಸ್ ಹಾಗೂ ಮಾದಕ ಮೈಮಾಟದಿಂದಲೇ ಹುಡುಗರ ಎದೆಗೆ ಕಿಚ್ಚು ಹೊತ್ತಿಸಿದ ನಟಿ.
80-90ರ ದಶಕದಲ್ಲಿ ಭಾರತೀಯ ಚಿತ್ರರಂಗದ ಅತೀ ಬೇಡಿಕೆಯ ನಟಿ ಅನ್ನಿಸಿಕೊಂಡಿದ್ದವರು ಸಿಲ್ಕ್ ಸ್ಮಿತಾ. ಡಿಸೆಂಬರ್ 2, 1960 ರಂದು ಆಂಧ್ರದಲ್ಲಿ ಜನಿಸಿದ ಸ್ಮಿತಾ ಇಂದು ನೆನಪಷ್ಟೇ. ಕನ್ನಡ, ತಮಿಳು, ತೆಲಗು, ಮಲೆಯಾಳಂ ಜೊತೆಗೆ, ಬಾಲಿವುಡ್ನಲ್ಲಿಯೂ ಬಹುಬೇಡಿಕೆಯ ನಟಿಯಾಗಿದ್ದರು. 1979ರಲ್ಲಿ ತಮಿಳು ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ಇವರು ಸಿನಿಮಾ ರಂಗಕ್ಕೆ ಕಾಲಿಟ್ಟರು.
ಮೊದಲು ವಿಜಯಲಕ್ಷ್ಮಿ ವಡ್ಲಪಟ್ಲ ಆಗಿದ್ದ ನಟಿ ಬಳಿಕ ಸಿಲ್ಕ್ ಸ್ಮಿತಾ ಆಗಿ ಹೆಚ್ಚು ಗಮನ ಸೆಳೆದರು. ಬರೋಬ್ಬರಿ 450ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. 17ನೇ ವಯಸ್ಸಿನಲ್ಲಿ ಮದುವೆಯಾದ ಸ್ಮಿತಾ ಗಂಡನಿಂದ ದೂರವೇ ಇದ್ದು ಬದುಕು ಸಾಗಿಸುತ್ತಾರೆ.
ಚಂದನವನದ ರವಿಚಂದ್ರನ್ ನಟನೆಯ ಹಳ್ಳಿಮೇಷ್ಟ್ರು ಚಿತ್ರದಲ್ಲಿನ ಸ್ಮಿತಾ ಅವರ ಟೀಚರ್ ಪಾತ್ರ ಸಖತ್ ಫೇಮಸ್ ಆಗಿತ್ತು. ಸೆಪ್ಟೆಂಬರ್ 23,1996 ರಂದು ಮೃತಪಟ್ಟ ಈ ಬಳುಕುವ ಬಳ್ಳಿಯ ಸಾವು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.
ತೆರೆ ಮೇಲೆ ಸಿಲ್ಕ್ ಸ್ಮಿತಾ ಬಯೋಪಿಕ್: ಸಿಲ್ಕ್ ಸ್ಮಿತಾ ಜೀವನದ ಕೆಲವೊಂದು ವಿಚಾರಗಳನ್ನು ವಿದ್ಯಾ ಬಾಲನ್ ಅಭಿನಯದ 'ಡರ್ಟಿ ಪಿಕ್ಚರ್' ಸಿನಿಮಾದಲ್ಲಿ ಅಳವಡಿಸಿಕೊಳ್ಳಲಾಗಿತ್ತು. 2011ರಲ್ಲಿ ಬಿಡುಗಡೆಯಾದ ಈ ಸಿನಿಮಾ ವಿದ್ಯಾ ಬಾಲನ್ ಅವರ ವೃತ್ತಿ ಜೀವನದಲ್ಲೂ ದೊಡ್ಡ ಹೆಸರು ತಂದುಕೊಟ್ಟಿತು.
ಈ ಚಿತ್ರದಿಂದ ವಿದ್ಯಾ ಬಾಲನ್ಗೆ ಅತ್ಯುತ್ತಮ ನಟಿ ಪ್ರಶಸ್ತಿ ಕೂಡಾ ದೊರೆಯಿತು. ಇದೀಗ ಸಿಲ್ಕ್ ಸ್ಮಿತಾ ಕುರಿತಾದ ಸಿನಿಮಾವೊಂದು ತಮಿಳಿನಲ್ಲಿ ತಯಾರಾಗುತ್ತಿದೆ. ಕೆ.ಎಸ್. ಮಣಿಕಂಠನ್ ನಿರ್ದೇಶನದ ಈ ಚಿತ್ರಕ್ಕೆ 'ಅವಳ್ ಅಪ್ಪಡಿತಾನ್' ಎಂದು ಹೆಸರಿಡಲಾಗಿದೆ.