ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಯುವರತ್ನ ' ಏಪ್ರಿಲ್ 1 ರಂದು ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಸಿನಿಮಾ ನೋಡಲು ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ಈಗಾಗಲೇ ಹಾಡುಗಳು ಹಾಗೂ ಟ್ರೇಲರ್ನಿಂದ ಗಮನ ಸೆಳೆದಿದೆ.
ಇದನ್ನೂ ಓದಿ: ರಿಷಭ್ ಶೆಟ್ಟಿ 'ಹೀರೋ' ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ...?
ಚಿತ್ರತಂಡ ಸದ್ಯಕ್ಕೆ ಸಿನಿಮಾ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿ ಇದೆ. ಈ ನಡುವೆ ಚಿತ್ರತಂಡದ ಸದಸ್ಯರು ಕೊಲ್ಲಾಪುರಕ್ಕೆ ತೆರಳಿ ದೇವಿ ದರ್ಶನ ಪಡೆದಿದ್ದಾರೆ. 'ಯುವರತ್ನ ' ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದ್ ರಾಮ್, ಚಿತ್ರದ ನಾಯಕ ಪುನೀತ್ ರಾಜ್ಕುಮಾರ್ ಹಾಗೂ ಚಿತ್ರತಂಡದ ಇತರ ಸದಸ್ಯರು ಕೊಲ್ಲಾಪುರದ ಅಂಬಾಬಾಯಿ ದೇವಸ್ಥಾನಕ್ಕೆ ಭೇಟಿ ನೀಡಿ ಮಹಾಲಕ್ಷ್ಮಿ ಅಮ್ಮನವರ ಆಶೀರ್ವಾದ ಪಡೆದಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಆಗಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಯುವರತ್ನ ' ಸಿನಿಮಾ ಅಪ್ಪು ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದೆ. ಪುನೀತ್ ರಾಜ್ಕುಮಾರ್ ಜೊತೆ ಸಯೇಶಾ ಸೈಗಲ್, ಪ್ರಕಾಶ್ ರೈ, ಧನಂಜಯ್, ಸೋನುಗೌಡ, ದಿಗಂತ್ ಹೀಗೆ ದೊಡ್ಡ ತಾರಾ ಬಳಗವೇ ಇದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ವಿಜಯ್ ಕಿರಗಂದೂರು ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಎಸ್. ತಮನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಏಪ್ರಿಲ್ 1 ರಂದು 'ಯುವರತ್ನ' ತೆರೆ ಮೇಲೆ ಅಬ್ಬರಿಸಲಿದೆ.