ಪವರ್ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ, ಸಂತೋಷ್ ಆನಂದ್ ರಾಮ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಯುವರತ್ನ, ಟೈಟಲ್ ಹಾಗು ಪೋಸ್ಟರ್ನಿಂದಲೇ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿತ್ತು. ಇದೀಗ ಯುವರತ್ನ ಚಿತ್ರ ಕೊನೆಗೂ ಶೂಟಿಂಗ್ ಮುಗಿಸಿ ಕುಂಬಳಕಾಯಿ ಒಡೆದಿದೆ.
ಪುನೀತ್ ರಾಜ್‌ಕುಮಾರ್ ಹಾಗು ಸಯ್ಯೇಶಾ ನಡುವಿನ ರೊಮ್ಯಾಂಟಿಕ್ ಹಾಡನ್ನು ಯೂರೋಪ್ನಲ್ಲಿ ಚಿತ್ರೀಕರಣ ಮಾಡಲು ಚಿತ್ರ ತಂಡ ಪ್ಲಾನ್ ಮಾಡಿತ್ತು. ಆದರೆ ಕೊರೊನಾದಿಂದಾಗಿ ಈ ಹಾಡನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿ ಸೆಟ್‌ಗಳನ್ನು ಹಾಕಿ ಶೂಟ್ ಮಾಡಿದೆ.
ಈ ಖುಷಿಯ ವಿಚಾರವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪವರ್ ಸ್ಟಾರ್, ಸಯ್ಯೇಶಾ, ನಿರ್ಮಾಪಕ ವಿಜಯ್ ಕಿರಂಗದೂರ್, ಡ್ಯಾನ್ಸ್ ಮಾಸ್ಟರ್ ಚಿನ್ನಿ ಪ್ರಕಾಶ್ ಇರುವ ಫೋಟೋ ಹಾಕುವ ಮೂಲಕ ಸಂತೋಷ್ ಶೂಟಿಂಗ್ ಮುಕ್ತಾಯದ ಮಾಹಿತಿ ಹಂಚಿಕೊಂಡಿದ್ದಾರೆ.
'ಯುವರತ್ನ ಸಿನಿಮಾ ಶೂಟಿಂಗ್ ಮುಕ್ತಾಯವಾಯಿತು, ನನ್ನ ಬೆನ್ನು ತಟ್ಟಿ ಸಿನಿಮಾವನ್ನು ಯಶಸ್ವಿಯಾಗಿ ಮುಗಿಸಿಕೊಟ್ಟ ಪುನೀತ್ ಸರ್, ವಿಜಯ್ ಸರ್, ವೆಂಕಟ್ ಸರ್ , ಶಿವು ಸರ್ ಹಾಗು ನನ್ನ ಡೈರೆಕ್ಷನ್ ತಂಡಕ್ಕೆ ಮತ್ತು ಹೊಂಬಾಳೆ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು. ನನ್ನ ತಂಡ ನನ್ನ ಶಕ್ತಿ' ಎಂದು ಬರೆದುಕೊಂಡಿದ್ದಾರೆ.
ನಾಡ ಹಬ್ಬದ ಪ್ರಯುಕ್ತ ಯುವರತ್ನ ಸಿನಿಮಾ ತಂಡದಿಂದ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಗಲಿದೆ ಅಂತಾ ನಿರ್ದೇಶಕ ಸಂತೋಷ್ ಆನಂದ್ ಹೇಳಿದ್ದಾರೆ. ಈಗಾಗಲೇ ಯುವರತ್ನ ಸಿನಿಮಾದ ಸಣ್ಣ ಟೀಸರ್ನಲ್ಲಿ, ಪುನೀತ್ ಕಾಲೇಜು ಹುಡ್ಗ, ರಗ್ಬಿಆಟಗಾರ ಹಾಗು ಆ್ಯಕ್ಷನ್ ಹೀರೋ ಆಗಿ ಅಬ್ಬರಿಸಿದ್ದಾರೆ.