'ಕನ್ನಡತಿ' ಖ್ಯಾತಿಯ ಕಿರಣ್‍ರಾಜ್ ಇದೀಗ ಹಿರಿತೆರೆಯಲ್ಲಿ ಹೀರೋ ಆಗುವುದಕ್ಕೆ ಹೊರಟಿದ್ದಾರೆ. ಡಾ. ರಾಜಕುಮಾರ್ ಅವರ 'ಬಹದ್ದೂರ್ ಗಂಡು' ಚಿತ್ರದ ಹೆಸರಿನಲ್ಲೇ ಬರುತ್ತಿರುವ ಸಿನಿಮಾಗೆ ಕಿರಣ್‍ರಾಜ್ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ.
ಈ ಹಿಂದೆ 'ರತ್ನಮಂಜರಿ' ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಪ್ರಸಿದ್ಧ್ ಈ ಚಿತ್ರವನ್ನು ನಿರ್ದೇಶಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ಇದೀಗ ಯಶಾ ಶಿವಕುಮಾರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಈಗಾಗಲೇ ರಾಜ್ ಬಿ ಶೆಟ್ಟಿ ಸಾರಥ್ಯಧ 'ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್', ಯೋಗರಾಜ್ ಭಟ್ ನಿರ್ಮಾಣದ 'ಪದವಿಪೂರ್ವ' ಮತ್ತು ಶಿವರಾಜಕುಮಾರ್ ಅಭಿನಯದ 'ಶಿವಪ್ಪ' ಚಿತ್ರಗಳಲ್ಲಿ ಈ ಹುಡುಗಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೆಲ್ಲದರ ಜೊತೆಗೆ ಯಶಾ ಫಿಲ್ಮಾಗ್ರಫಿಗೆ ಇದೀಗ 'ಬಹದ್ದೂರ್ ಗಂಡು' ಸಹ ಸೇರ್ಪಡೆಯಾಗಿದೆ.
ಮಾಡಲಿಂಗ್ ಕ್ಷೇತ್ರದಿಂದ ಬೆಳ್ಳಿತೆರೆಗೆ ಬಂದಿರುವ ಯಶಾ, ಮೊದಲ ಚಿತ್ರ ಬಿಡುಗಡೆಯಾಗುವುದಕ್ಕಿಂತ ಮುನ್ನವೇ ಇನ್ನೂ ಮೂರು ಚಿತ್ರಗಳಲ್ಲಿ ನಟಿಸುತ್ತಿರುವುದು ವಿಶೇಷ.
'ಬಹದ್ದೂರ್ ಗಂಡು' ಚಿತ್ರದಲ್ಲಿ ಯಶಾ ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. "ಹಳ್ಳಿ ಗೌಡರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಸ್ಪ್ಲಿಟ್ ಪರ್ಸನಾಲಿಟಿ ಇರುವ ಪಾತ್ರ ನನ್ನದು. ಚಿತ್ರಕ್ಕೊಂದು ವಿಭಿನ್ನವಾದ ಟ್ವಿಸ್ಟ್ ಕೊಡುವ ಪಾತ್ರ. ಬಹಳ ಎಕ್ಸೈಟ್ ಆಗಿದ್ದೇನೆ" ಎಂದು ದಿಶಾ ಹೇಳಿಕೊಂಡಿದ್ದಾರೆ.
ಮಾರ್ಚ್‍ನಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿ ಇನ್ನಷ್ಟೇ ಬಹಿರಂಗವಾಗಬೇಕಿದೆ.