ನಿಂತ ನೋಡು ಯಜಮಾನ ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಹಾಡಿನ ಸಾಲು. ಅದು ಅಕ್ಷರಶಃ ಸರಿಯಾಗಿದೆ. ‘ಯಜಮಾನ’ ದಿ ಬಾಸ್ ದರ್ಶನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ, ನಿರ್ಮಾಪಕಿ ಶೈಲಜಾ ಸುರೇಶ್ ಅವರ ಸಿನಿಮಾ 100ನೇ ದಿವಸಕ್ಕೆ ಮೊನ್ನೆ ಕಾಲಿಟ್ಟಿದೆ. ಈ ಚಿತ್ರ ಮಾರ್ಚ್ 1 ರಂದು ಬಿಡುಗಡೆಯಾಗಿತ್ತು.
‘ಯಜಮಾನ’ 100 ದಿವಸಕ್ಕೆ ಕಾಲಿಟ್ಟಿರುವುದು ಜಂಟಿ ನಿರ್ದೇಶಕ ವಿ ಹರಿಕೃಷ್ಣ ಅವರಿಗೆ ಬಹಳ ಸ್ಪೆಷಲ್. ಅವರು 100 ಕನ್ನಡ ಸಿನಿಮಾಗಳ ಸಂಗೀತ ನಿರ್ದೇಶಕರೂ ಕೂಡ. ಪೋನ್ ಕುಮಾರ್ ಜೊತೆ ಸೇರಿಕೊಂಡು ವಿ ಹರಿಕೃಷ್ಣ ನಿರ್ದೇಶನ ಮಾಡಿದ್ದಾರೆ. ವಿ. ಹರಿಕೃಷ್ಣ ಅವರ ಸಂಗೀತದಲ್ಲಿ ಶೀರ್ಷಿಕೆ ಗೀತೆ, ಬಸಣ್ಣೀ ಬಾ.... ಒಂದು ಮುಂಜಾನೆ... ಅತ್ಯಂತ ಜನಪ್ರಿಯತೆ ಸಹ ಪಡೆದುಕೊಂಡಿವೆ. ಈ ಚಿತ್ರಕ್ಕೆ ಶ್ರೀಶ ಕೂಡ ಛಾಯಾಗ್ರಹಣ ಮಾಡಿರುವರು.
ಅಂದ ಹಾಗೆ ಯಜಮಾನ 100ನೇ ದಿವಸಕ್ಕೆ ಕರ್ನಾಟಕದಾದ್ಯಂತ 10 ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗುತ್ತಿದೆ. ಬಿಡುಗಡೆ ಆದಾಗ 225 ಚಿತ್ರಮಂದಿರಗಳಲ್ಲಿ 25 ದಿವಸ, 150 ಚಿತ್ರಮಂದಿರಗಳಲ್ಲಿ 50 ದಿವಸ, 40 ಚಿತ್ರಮಂದಿರಗಳಲ್ಲಿ 75 ದಿವಸ ಪ್ರದರ್ಶನ ಆಗಿ 100 ನೇ ದಿವಸಕ್ಕೆ ಬರುವ ಹೊತ್ತಿಗೆ ಅದು 10 ಚಿತ್ರಮಂದಿರಗಳಿಗೆ ಮೀಸಲಾಗಿದೆ.
ಕನ್ನಡದಲ್ಲಿ ಈ ವರ್ಷ ‘ಬೆಲ್ ಬಾಟಂ’ ನಂತರ 100 ದಿವಸ ಪ್ರದರ್ಶನ ಕಾಣುತ್ತಿರುವ ಎರಡನೇ ಸಿನಿಮಾ ಯಜಮಾನ ದರ್ಶನ್ ಅಭಿನಯದ ಚಿತ್ರ. ಇದು ಬಿಡುಗಡೆಗೂ ಮುಂಚೆಯೇ ಬಹಳವಾಗಿ ಸೇಫ್ ಅನ್ನಿಸಿಕೊಂಡ ಸಿನಿಮಾ. ಮೊದಲ ವಾರದಲ್ಲೇ ದೊಡ್ಡ ಮೊತ್ತದ ಲಾಭವನ್ನು ನಿರ್ಮಾಪಕರಿಗೆ ತಂದುಕೊಟ್ಟಿದೆ.