ಬೆಂಗಳೂರು: ನ್ಯಾಯಾಲಯ ಹಲವು ಬಾರಿ ಸಮನ್ಸ್ ಜಾರಿ ಮಾಡಿದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ಬೆಂಗಳೂರಿನ 9ನೇ ಎಸಿಎಂಎಂ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.
ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಅನುಮತಿ ಇಲ್ಲದೇ ಹಾಡು ಬಳಸಿದ ವಿಚಾರಕ್ಕೆ ಸಂಬಂಧಿಸಿದಂತೆ ಲಹರಿ ಆಡಿಯೋ ಸಂಸ್ಥೆ ಕಾಪಿ ರೈಟ್ ಕಾಯ್ದೆಯಡಿ ನಟ ರಕ್ಷಿತ್ ಶೆಟ್ಟಿ, ಪರಮ್ವಾ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್ ಹಾಗು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿರುದ್ಧ ಪ್ರಕರಣ ದಾಖಲಿಸಿತ್ತು.
ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ನಗರದ 9ನೇ ಎಸಿಎಂಎಂ ಕೋರ್ಟ್ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ ಆರೋಪಿಗಳು ನ್ಯಾಯಾಲಯಕ್ಕೆ ನಿರಂತರ ಗೈರು ಹಾಜರಾದ ಹಿನ್ನಲೆಯಲ್ಲಿ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.
ಪ್ರಕರಣದ ಹಿನ್ನೆಲೆ:
2016 ಡಿಸೆಂಬರ್ 30 ರಂದು ಬಿಡುಗಡೆಯಾಗಿದ್ದ ಕಿರಿಕ್ ಪಾರ್ಟಿ ಚಿತ್ರದಲ್ಲಿ He who are you ಹಾಡನ್ನು ಲಹರಿ ಸಂಸ್ಥೆಯ ಅನುಮತಿ ಇಲ್ಲದೆ ಬಳಸಲಾಗಿತ್ತು ಎಂಬ ಆರೋಪ ಇದಾಗಿದೆ. ಶಾಂತಿ-ಕ್ರಾಂತಿ ಚಿತ್ರದ ಹಾಡನ್ನ ಚಿತ್ರದಲ್ಲಿ ಬಳಸಿಕೊಂಡಿದ್ದರೆನ್ನಲಾದ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಪರಮ್ವಾ ಸ್ಟುಡಿಯೋ ವಿರುದ್ಧ ಲಹರಿ ಸಂಸ್ಥೆ 2017ರ ಜನವರಿ 11 ರಂದು ದೂರು ದಾಖಲಿಸಿತ್ತು.