ಕೆಜಿಎಫ್ 2 ನಂತರ ನಟ ಯಶ್ ಅಭಿನಯದ ಹೊಸ ಚಿತ್ರ ಯಾವುದು? ಚಿತ್ರವನ್ನು ಯಾರು ನಿರ್ಮಿಸಲಿದ್ದಾರೆ? ಹೀಗೆ ಹಲವು ಪ್ರಶ್ನೆ ಇದ್ದೇ ಇದೆ. ಸೂಕ್ತ ಉತ್ತರ ಸಿಗದೆ ಯಶ್ ಅಭಿಮಾನಿಗಳು ಸ್ಪಷ್ಟ ಮಾಹಿತಿಗಾಗಿ ಕಾಯುತ್ತಿದ್ದಾರೆ.
ಕೆಜಿಎಫ್ 2 ಚಿತ್ರೀಕರಣ ಮುಗಿದು ಬಿಡುಗಡೆಯ ದಿನಾಂಕ ಘೋಷಣೆಯಾದರೂ ಯಶ್ ಅಭಿನಯದ ಮುಂದಿನ ಚಿತ್ರದ ಬಗ್ಗೆ ಹೆಚ್ಚು ಸ್ಪಷ್ಟತೆ ಇಲ್ಲ. ಮಫ್ತಿ ನಿರ್ದೇಶಿಸಿದ್ದ ನರ್ತನ್ ಈ ಚಿತ್ರವನ್ನು ನಿರ್ದೇಶಿಸುತ್ತಾರೆ ಎಂಬ ವಿಷಯ ಬಿಟ್ಟರೆ ಈ ಚಿತ್ರವನ್ನು ಯಾರು ನಿರ್ಮಿಸುತ್ತಾರೆ, ಯಾವಾಗ ಪ್ರಾರಂಭವಾಗುತ್ತದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಯಾರಿಗೂ ಇರಲಿಲ್ಲ.
ಇದೀಗ ಹೊಸ ಸುದ್ದಿಯ ಪ್ರಕಾರ, ಯಶ್ ಅಭಿನಯದ ಹೊಸ ಚಿತ್ರವನ್ನು ಜೀ ಸಿನಿಮಾಸ್ ಸಂಸ್ಥೆಯು ನಿರ್ಮಿಸುತ್ತಿದೆಯಂತೆ. ಈ ಸುದ್ದಿಗೆ ಜೀ ಸಿನಿಮಾಸ್ ಮತ್ತು ಯಶ್ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬರದಿದ್ದರೂ ಸುದ್ದಿಯಂತೂ ಸಿಕ್ಕಾಪಟ್ಟೆ ಚಾಲ್ತಿಯಲ್ಲಿದೆ.
ಇದನ್ನೂ ಓದಿ: ಸ್ಮಶಾನ ಸಿಬ್ಬಂದಿಗೆ ರೇಷನ್ ವಿತರಿಸಿ ನಟಿ ರಾಗಿಣಿ ಮಾನವೀಯತೆ
ಕೆಜಿಎಫ್ 2 ಚಿತ್ರದ ನಂತರ ಯಶ್ ಅಭಿನಯದ ಹೊಸ ಚಿತ್ರವನ್ನು ತೆಲುಗು ಅಥವಾ ತಮಿಳು ನಿರ್ಮಾಪಕರೊಬ್ಬರು ನಿರ್ಮಿಸಬಹುದು ಎಂದು ಹೇಳಲಾಗಿತ್ತು. ಅದಕ್ಕೆ ಸರಿಯಾಗಿ ತೆಲುಗಿನ ಕೆಲವು ಜನಪ್ರಿಯ ನಿರ್ಮಾಪಕರ ಜತೆಗೆ ಯಶ್ ಮಾತಾಡಿದ್ದಾರೆ ಎಂಬ ಸುದ್ದಿಯೂ ಇತ್ತು. ಇದೀಗ, ಜೀ ಸಿನಿಮಾಸ್ ಸಂಸ್ಥೆಯು ಯಶ್ ಜತೆಗೆ ಚಿತ್ರ ಮಾಡುವುದಕ್ಕೆ ಉತ್ಸುಕವಾಗಿದ್ದು, ಈ ಸಂಬಂಧ ಒಂದು ರೌಂಡ್ ಮೀಟಿಂಗ್ ಸಹ ಮುಗಿಸಿದೆಯಂತೆ.
ಮೊದಲೇ ಹೇಳಿದಂತೆ ಸದ್ಯಕ್ಕೆ ಯಾವುದೇ ಅಧಿಕೃತ ಪ್ರಕಟಣೆ ಮಾತ್ರ ಹೊರಬಿದ್ದಿಲ್ಲ. ನಿಜಕ್ಕೂ ಯಶ್ ಅಭಿನಯದ ಮುಂದಿನ ಚಿತ್ರವನ್ನು ಜೀ ಸಿನಿಮಾಸ್ ಸಂಸ್ಥೆಯು ನಿರ್ಮಿಸಲಿದೆಯಾ? ಎಂಬ ಪ್ರಶ್ನೆಗೆ ಉತ್ತರ ಸಿಗುವುದಕ್ಕೆ ಇನ್ನಷ್ಟು ಸಮಯ ಕಾದು ನೋಡಬೇಕಿದೆ.