ಕನ್ನಡ ಚಿತ್ರರಂಗದಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಒಂದು ದಾಖಲೆ ಇದೆ. ಅದೇನೆಂದರೆ, ಅತೀ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆದ ಚಿತ್ರ ಅದು. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರೇ ಹೇಳಿಕೊಂಡಂತೆ, ದಾಖಲೆಯ 196 ದಿನಗಳ ಕಾಲ ಶೂಟಿಂಗ್ ಮಾಡಲಾಗಿತ್ತು.
ಈಗ ಆ ದಾಖಲೆಯನ್ನು ಉಪೇಂದ್ರ ಅಭಿನಯದ 'ಕಬ್ಜ' ಚಿತ್ರವು ಮುರಿಯುವ ಸಾಧ್ಯತೆ ಇದೆ. ಕಳೆದ ವರ್ಷದ ಆರಂಭದಲ್ಲಿ ಪ್ರಾರಂಭವಾದ ಈ ಚಿತ್ರಕ್ಕೆ 80ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮುಗಿದಿದೆ. ಆದರೆ, ಇಲ್ಲಿಯವರೆಗೂ ಮುಗಿದಿರುವುದು ಶೇ. 50ರಷ್ಟು ಮಾತ್ರ. ಇನ್ನುಳಿದ ಅರ್ಧ ಭಾಗದ ಚಿತ್ರೀಕರಣಕ್ಕೆ 150 ದಿನಗಳು ಬೇಕಂತೆ. ಅಲ್ಲಿಗೆ ಈ ಚಿತ್ರಕ್ಕೆ 200ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆಸಿದಂತೆ ಆಗುತ್ತದೆ. ಈ ಮೂಲಕ 'ಕಬ್ಜ' ಚಿತ್ರವು 'ಅವನೇ ಶ್ರೀಮನ್ನಾರಾಯಣ'ನ ದಾಖಲೆ ಮುರಿಯಲಿದೆ.
ಈಗಾಗಲೇ 'ಕಬ್ಜ' ಚಿತ್ರದ ಚಿತ್ರೀಕರಣ ಅದೇ ಮಿನರ್ವ ಮಿಲ್ನಲ್ಲಿ ಪ್ರಾರಂಭವಾಗಲಿದೆ. ಇದು ಐದನೇ ಹಂತದ ಚಿತ್ರೀಕರಣ. ಮುಂದಿನ 150 ದಿನಗಳ ಕಾಲ ಹೈದರಾಬಾದ್, ಮಂಗಳೂರು, ಮುಂಬೈ ಮುಂತಾದ ಕಡೆ ಚಿತ್ರೀಕರಣ ನಡೆಯಲಿದ್ದು, 2022ರಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಇದು ಉಪೇಂದ್ರ ಅವರ ವೃತ್ತಿಜೀವನದಲ್ಲೂ ಅತೀ ಹೆಚ್ಚು ಚಿತ್ರೀಕರಣಗೊಂಡ ಚಿತ್ರ ಎಂಬ ದಾಖಲೆಗೆ ಪಾತ್ರವಾಗುತ್ತದೆ. ಚಿತ್ರ ಮೂಡಿಬರುತ್ತಿರುವ ರೀತಿಗೆ ಖುಷಿ ಇದೆ ಎನ್ನುವ ಅವರು, ಚಂದ್ರು ಬಹಳ ಪ್ಯಾಷನ್ ಇರುವ ನಿರ್ದೇಶಕ. ಅವರ ಸಿನಿಮಾ ಪ್ರೀತಿಗೆ ನನ್ನ ಬೆಂಬಲ ಸದಾ ಇರುತ್ತದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಡಾಲಿ 'ಬಡವ ರಾಸ್ಕಲ್' ಬಿಡುಗಡೆ ದಿನಾಂಕ ಘೋಷಣೆ