ರಕ್ಷಿತ್ ಶೆಟ್ಟಿ ಮತ್ತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮಧ್ಯೆ ಏನಾದರೂ ಭಿನ್ನಾಭಿಪ್ರಾಯ ಉಂಟಾಗಿದೆಯೇ ಎಂಬ ಪ್ರಶ್ನೆಯೊಂದು ಕಳೆದ ಕೆಲ ದಿನಗಳಿಂದ ಗಾಂಧಿ ನಗರದಲ್ಲಿ ಕೇಳಿಬರುತ್ತಿದೆ.
ಒಟ್ಟಿಗೆ ಚಿತ್ರ ನಿರ್ಮಿಸುತ್ತಿದ್ದ ಇಬ್ಬರು, ಇದೀಗ ಪ್ರತ್ಯೇಕವಾಗಿ ಚಿತ್ರ ನಿರ್ಮಿಸುತ್ತಿರುವುದು ಅವರಿಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಎತ್ತಿ ತೋರಿಸುತ್ತಿದೆ.
ಪುಷ್ಕರ್ ನಿರ್ಮಾಣದ ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ರಕ್ಷಿತ್ ನಟಿಸಿದ್ದರು. ಅಲ್ಲಿಂದ ಅವರಿಬ್ಬರ ನಡುವೆ ಸ್ನೇಹ ಗಾಢವಾಯಿತು. ನಂತರ ದಿನಗಳಲ್ಲಿ ಇಬ್ಬರೂ ಜೊತೆಯಾಗಿ ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, 777 ಚಾರ್ಲಿ ಮುಂತಾದ ಚಿತ್ರಗಳನ್ನು ಜೊತೆಯಾಗಿ ನಿರ್ಮಿಸಿದರು.`ಸಪ್ತ ಸಾಗರದಾಚೆ ಎಲ್ಲೋ' ಚಿತ್ರವನ್ನೂ ರಕ್ಷಿತ್ ಮತ್ತು ಪುಷ್ಕರ್ ಜೊತೆಯಾಗಿ ನಿರ್ಮಿಸಬೇಕಿತ್ತು. ಆರಂಭದಲ್ಲಿ ಈ ಚಿತ್ರದಲ್ಲಿ ತೊಡಗಿಸಿಕೊಂಡಿದ್ದ ಪುಷ್ಕರ್, ಇದ್ದಕ್ಕಿದ್ದಂತೆ ಚಿತ್ರದಿಂದ ಹೊರಬಂದರು. ಚಿತ್ರದ ಮುಹೂರ್ತದಲ್ಲೂ ಅವರು ಕಾಣಿಸದಿದ್ದುದು, ಹಲವರಲ್ಲಿ ಅನುಮಾನ ಮೂಡಿಸಿತ್ತು. ಪುಷ್ಕರ್ ಹಲವು ಚಿತ್ರಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಈ ಚಿತ್ರದಲ್ಲಿ ಭಾಗಿಯಾಗುವುದಕ್ಕೆ ಆಗುತ್ತಿಲ್ಲ. ಹಾಗಾಗಿ ಈ ಚಿತ್ರವನ್ನು ಸ್ವತಂತ್ರವಾಗಿ ನಿರ್ಮಿಸುತ್ತಿರುವುದಾಗಿ ರಕ್ಷಿತ್ ಹೇಳಿಕೊಂಡಿದ್ದರು.
ಈಗ ರಕ್ಷಿತ್ ತಮ್ಮ ಪರಂವಾ ಸ್ಟುಡಿಯೋಸ್‍ನಿಂದ `ಸಕುಟುಂಬ ಸಮೇತ' ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದು, ಅದರಲ್ಲೂ ಪುಷ್ಕರ್ ಇಲ್ಲ. ಈ ಹಿಂದೆ ಕಿರಿಕ್ ಪಾರ್ಟಿಯಲ್ಲಿ ಸಹ ನಿರ್ಮಾಪಕರಾಗಿದ್ದ ಗುಪ್ತಾ ಎನ್ನುವವರು ರಕ್ಷಿತ್ ಜೊತೆಗೆ ಸೇರಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. 777 ಚಾರ್ಲಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತ್ ಆಗಾಗ ಕೆಲವು ವಿಷಯಗಳನ್ನು ಹಂಚಿಕೊಳ್ಳುತ್ತಾರಾದರೂ, ಪುಷ್ಕರ್ ಅವರನ್ನು ದೂರವೇ ಇಟ್ಟಿದ್ದಾರೆ.
ನಿಜಕ್ಕೂ ಪುಷ್ಕರ್ ಮತ್ತು ರಕ್ಷಿತ್ ದೂರವಾಗಿದ್ದಾರಾ? ಹಾಗಿದ್ದರೆ, ಅದಕ್ಕೆ ಕಾರಣಗಳೇನಿರಬಹುದು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಆದರೆ, ರಕ್ಷಿತ್ ಆಗಲಿ, ಪುಷ್ಕರ್ ಆಗಲಿ ಈ ವಿಷಯದ ಬಗ್ಗೆ ಮಾತಾಡುತ್ತಿಲ್ಲ.
ಓದಿ; ರಾಷ್ಟ್ರ ಪ್ರಶಸ್ತಿ ಪಡೆದ 'ಮಹಾನ್ ಹುತಾತ್ಮ' ಕಿರುಚಿತ್ರದಲ್ಲಿ ನಟಿಸಿದ ಅದ್ವಿತಿ ಶೆಟ್ಟಿ