ಇತ್ತೀಚೆಗೆ ಬಾಲಿವುಡ್ ನಟಿ ಐಶ್ವರ್ಯ ರೈ ಬಗ್ಗೆ ಟ್ರೋಲ್ ಮಾಡಲಾಗಿದ್ದ ಮೀಮ್ ಶೇರ್ ಮಾಡಿ ಟೀಕೆಗೆ ಗುರಿಯಾಗಿದ್ದ ನಟ ವಿವೇಕ್ ಒಬೇರಾಯ್ಗೆ ಇದೀಗ ಮತ್ತೊಂದು ಕಂಟಕ ಕಾಡಲಾರಂಭಿಸಿದೆಯಂತೆ.
ಹೌದು, ಅವರ ಮೊಬೈಲ್ಗೆ ಅನಾಮಿಕ ಕರೆಯೊಂದು ಬಂದಿದ್ದು, ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರಂತೆ. ಈ ಕರೆ ನಕ್ಸಲ್ರಿಂದ ಬಂದಿದೆ ಎನ್ನಲಾಗುತ್ತಿದೆ. ಕರೆ ಮಾಡಿದ ನಕ್ಸಲ್ಗಳು, ಈ ಸಾರಿ ನಿನ್ನನ್ನು ಮುಗಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರಂತೆ. ಈ ಬೆದರಿಕೆಯಿಂದ ಆತಂಕಕ್ಕೀಡಾದ ಒಬೇರಾಯ್ ಭದ್ರತೆಗಾಗಿ ಮುಂಬೈ ಪೊಲೀಸರ ಮೊರೆ ಹೋಗಿದ್ದಾರಂತೆ.
ನಟ ವಿವೇಕ್ ಒಬೇರಾಯ್, ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ಸಿನಿಮಾದಿಂದ ಸ್ವಲ್ಪ ಸುದ್ದಿಗೆ ಆಹಾರವಾಗಿದ್ದರು. ಇನ್ನು ಲೋಕ ಕದನದ ಎಕ್ಸಿಟ್ ಪೋಲ್ ಬಂದ ದಿನ ನಟಿ ಐಶ್ವರ್ಯ ರೈ ಬಗ್ಗೆ ಟ್ರೋಲ್ ಮಾಡಿ ಟೀಕೆಗೆ ಗುರಿಯಾಗಿದ್ದರು. ಹೀಗೆ. ಒಂದಿಲ್ಲೊಂದು ಸಂಕಷ್ಟದ ಸುಳಿಗೆ ಸಿಕ್ಕಿಹಾಕಿಕೊಳ್ಳುತ್ತಿರುವ ಒಬೇರಾಯ್ ಇದೀಗ ಜೀವ ಬೆದರಿಕೆಯಲ್ಲಿ ಓಡಾಡುತ್ತಿದ್ದಾರೆ.