ಇಂದು ರಾಜ್ಯಾದ್ಯಂತ ಜಗಜ್ಯೋತಿ, ವಿಶ್ವಗುರು ಬಸವ ಜಯಂತಿಯನ್ನು ಆಚರಿಸುತ್ತಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕೂಡಾ ವಿಶ್ವಗುರುವಿಗೆ ಗೌರವ ಸಲ್ಲಿಸುವ ಮೂಲಕ ಬಸವ ಜಯಂತಿ ಆಚರಿಸಲಾಗಿದೆ.
ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಚಿನ್ನೇಗೌಡ್ರು, ಭಾ.ಮ.ಹರೀಶ್, ಮಾಜಿ ಅಧ್ಯಕ್ಷ ಚಂದ್ರಶೇಖರ್, ಕರಿಸುಬ್ಬು ಹಾಗೂ ಅನೇಕ ಗಣ್ಯರು ಭಾಗಿಯಾಗಿ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪ ಅರ್ಪಣೆ ಮಾಡುವ ಮೂಲಕ ವಿಶ್ವಗುರುವಿಗೆ ಗೌರವ ಸಲ್ಲಿಸಿದರು. ನಂತರ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರು, ಬಸವಣ್ಣನವರ ವಚನಗಳು ಎಂತಹ ಅವಿದ್ಯಾವಂತರಿಗೆ ಕೂಡಾ ಅರ್ಥ ಆಗುವಂತೆ ಇವೆ ಎಂದರು.
ಬಸವಣ್ಣನವರು ಅತಿ ಚಿಕ್ಕ ವಯಸ್ಸಿನಲ್ಲಿ ಸಾಮಾಜಿಕ ಕ್ರಾಂತಿ ಹಾಗೂ ಜಾತಿ ಭೇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಎಲ್ಲರೂ ನುಡಿದಂತೆ ನಡೆಯಬೇಕು. ಆ ರೀತಿ ಆದರೆ ಮಾತ್ರ ಸಮಾಜ ಸುಧಾರಣೆ ಆಗಲು ಸಾಧ್ಯ. ಇನ್ನು ಮುಂದಾದರೂ ಅವರ ತತ್ವಗಳನ್ನು ಹಾಗೂ ವಚನಗಳನ್ನು ತಪ್ಪದೆ ಪಾಲಿಸೋಣ ಎಂದು ಚಿನ್ನೇಗೌಡ ಹೇಳಿದರು.