ಪಡ್ಡೆಹುಲಿ ಶ್ರೇಯಸ್ ಮತ್ತು ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಆಭಿನಯದ 'ವಿಷ್ಣುಪ್ರಿಯ' ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ. ಮೊದಲ ಶೆಡ್ಯೂಲ್ ಮುಗಿಸಿರುವ ಚಿತ್ರತಂಡ, ಇದೀಗ ಎರಡನೇ ಶೆಡ್ಯೂಲ್ನಲ್ಲಿ ಬ್ಯುಸಿಯಾಗಿದೆ.
'ವಿಷ್ಣುಪ್ರಿಯ', 90 ರ ದಶಕದಲ್ಲಿ ನಡೆದಿರುವ ನೈಜ ಕಥೆ ಆಧಾರಿತ ಸಿನಿಮಾ. ಸಿನಿಮಾ ಟೈಟಲ್ ಹಾಗೂ ಪ್ರಿಯಾ ವಾರಿಯರ್ ಕನ್ನಡಕ್ಕೆ ಬಂದಿರುವುದು ಸಿನಿಮಾ ಮೇಲೆ ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಇತ್ತೀಚೆಗೆ ಪ್ರಿಯಾ ವಾರಿಯರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, 'ವಿಷ್ಣುಪ್ರಿಯ' ಚಿತ್ರದ ಚಿಕ್ಕದೊಂದು ಟೀಸರ್ ಕೂಡಾ ಬಿಡುಗಡೆಯಾಗಿದೆ. ಸದ್ಯಕ್ಕೆ ಆ್ಯಕ್ಷನ್ ಸೀಕ್ವೆನ್ಸ್ ಶೂಟಿಂಗ್ ನಡೆಯುತ್ತಿದೆ. ಹೆಬ್ಬಾಳದ ಪಶುವೈದ್ಯ ಕಾಲೇಜಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಕಾಲೇಜು ಎಂದ ಮೇಲೆ ಹುಡುಗರ ಗಲಾಟೆ ಇದ್ದೇ ಇರುತ್ತದೆ. ಅದೇ ರೀತಿ ವಿಷ್ಣು ಕೂಡಾ ಬೇರೊಂದು ಕಾಲೇಜಿನೊಳಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಫೈಟ್ ಮಾಡುವ ಸನ್ನಿವೇಶ ಇದು.
'ಪಡ್ಡೆಹುಲಿ' ಚಿತ್ರದಲ್ಲಿ ಶ್ರೇಯಸ್ಗೆ ಆ್ಯಕ್ಷನ್ ಕಂಪೋಸ್ ಮಾಡಿದ್ದ ವಿನೋದ್ ಮಾಸ್ಟರ್, ಈ ಚಿತ್ರದಲ್ಲಿ ಕೂಡಾ ಫೈಟ್ ಕೊರಿಯೋಗ್ರಫಿ ಮಾಡಿದ್ದಾರೆ. ಚಿತ್ರಕ್ಕೆ ಮಲೆಯಾಳಂ ನಿರ್ದೇಶಕ ವಿ.ಕೆ. ಪ್ರಕಾಶ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಮೇಕಿಂಗ್ ನೋಡುತ್ತಿದ್ದರೆ ಉತ್ತಮ ಸಿನಿಮಾ ನೀಡುವ ಭರವಸೆ ಮೂಡಿಸಿದ್ದಾರೆ. ಸದ್ಯಕ್ಕೆ ಶೇಕಡಾ 65 ಭಾಗ ಶೂಟಿಂಗ್ ಮುಗಿದಿದೆ. ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದ್ದು, ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.