ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ಕನ್ನಡ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಬಿ.ವಿಜಯ್ ಕುಮಾರ್ ನಿಧನರಾಗಿದ್ದಾರೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು, ನಿನ್ನೆ ರಾತ್ರಿ 9.30ರ ಸುಮಾರಿಗೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ಕನ್ನಡದ ಶ್ರೇಷ್ಠ ನಟ ದಿ.ಡಾ.ವಿಷ್ಣುವರ್ಧನ್ ಅವರಿಗೆ ಆಪ್ತರಾಗಿದ್ದ ಬಿ.ವಿಜಯ್ ಕುಮಾರ್, ಸಿಂಹಾದ್ರಿಯ ಸಿಂಹ, ಲಯನ್ ಜಗಪತಿ ರಾವ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.
ಇದರ ಜೊತೆಗೆ ಜಗದೇಕ ವೀರ, ಅವತಾರ ಪುರುಷ, ಮೌನ ಗೀತೆ ಸೇರಿದಂತೆ 17ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಪ್ತರಾಗಿದ್ದ ವಿಜಯಕುಮಾರ್ ಅವರು ಕರ್ನಾಟಕ ರೇಷ್ಮೆ ಮಂಡಳಿ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.
ಪತ್ನಿ ಪ್ರಭಾ ಮತ್ತು ಇಬ್ಬರು ಮಕ್ಕಳಾದ ಪವನ್ ಕುಮಾರ್, ಪ್ರಜ್ವಲ್ ಕುಮಾರ್ ಅವರನ್ನು ಅಗಲಿದ್ದಾರೆ. ಸದ್ಯ ಬಿ.ವಿಜಯ್ ಕುಮಾರ್ ಪಾರ್ಥಿವ ಶರೀರವನ್ನು ಜಯನಗರದ ಅವರ ನಿವಾಸದಲ್ಲಿ ಇಡಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಅಂತಿಮ ದರ್ಶನಕ್ಕೆ ಕೆಲವರಿಗಷ್ಟೇ ಅವಕಾಶ ನೀಡಲಾಗಿದೆ.
ಚಾಮರಾಜಪೇಟೆಯ ಚಿತಾಗಾರದಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.