ಸ್ಯಾಂಡಲ್ವುಡ್ ಹಾಸ್ಯನಟ ವೈಜನಾಥ್ ಬಿರಾದಾರ್, ತಮ್ಮದೇ ವಿಭಿನ್ನ ಅಭಿನಯದ ಮೂಲಕ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರರಾಗಿರುವ ಕಲಾವಿದ. ಇವರು ನಟಿಸಿರುವ 'ಕನಸೆಂಬೋ ಕುದುರೆಯನೇರಿ' ಚಿತ್ರಕ್ಕೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಕೂಡಾ ಲಭಿಸಿದೆ.
ಬಿರಾದಾರ್ ಈಗ '90 ಹೊಡಿ ಮನೀಗ್ ನಡಿ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅವರ 500ನೇ ಸಿನಿಮಾ ಎನ್ನುವುದು ವಿಶೇಷ. ಇದೊಂದು ಕಾಮಿಡಿ ಚಿತ್ರ. ಅಲ್ಲದೆ, ಮದ್ಯಪಾನದಿಂದಾಗುವ ದುಷ್ಪರಿಣಾಮಗಳನ್ನು ಈ ಚಿತ್ರದಲ್ಲಿ ತೋರಿಲಾಗಿದೆ. ಅಮ್ಮ ಟಾಕೀಸ್ ಬಾಗಲಕೋಟೆ ಸಂಸ್ಥೆ ಲಾಂಛನದಲ್ಲಿ ರತ್ನಮಾಲ ಬಾದರದಿನ್ನಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ್ ಅರೆಹೊಳೆ ಜೊತೆಯಾಗಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ ಹಾಗೂ ಸಂಭಾಷಣೆ ಉಮೇಶ್ ಬಾದರದಿನ್ನಿ ಅವರೇ ಬರೆದಿದ್ದಾರೆ. ಚಿತ್ರಕಥೆಯನ್ನು ಇಬ್ಬರು ನಿರ್ದೇಶಕರು ಸೇರಿ ರಚಿಸಿದ್ದಾರೆ.
ಉಮೇಶ್ ಬಾದರದಿನ್ನಿ ಇದಕ್ಕೂ ಮುನ್ನ 'ಬಿಡಲಾರೆ ಎಂದೂ ನಿನ್ನ' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಇದರೊಂದಿಗೆ 'ಹಾರೋ ಹಕ್ಕಿ' ಹಾಗೂ 'ಕೀಟ್ಲೆ ಕೃಷ್ಣ' ಎಂಬ ಮಕ್ಕಳ ಚಿತ್ರಗಳನ್ನು ಕೂಡಾ ನಿರ್ದೇಶಿಸಿದ್ದಾರೆ. '90 ಹೊಡಿ ಮನೀಗ್ ನಡಿ' ಅರ್ಧ ಬಾಗ ಚಿತ್ರೀಕರಣ ನಡೆದಿದೆ. ಮುಂದಿನ ಭಾಗದ ಚಿತ್ರೀಕರಣ ಬೆಂಗಳೂರು ಹಾಗೂ ಬಿಡದಿ ಸುತ್ತಮುತ್ತ ನಡೆಯಲಿದೆ. ಚಿತ್ರದಲ್ಲಿ 3 ಹಾಡುಗಳಿದ್ದು, ಕಿರಣ್ ಶಂಕರ್-ಶಿವು ಭೇರಗಿ ಸಂಗೀತ ನಿರ್ದೇಶನವಿದೆ. ಡಾ. ವಿ. ನಾಗೇಂದ್ರ ಪ್ರಸಾದ್ ಚಿತ್ರಕ್ಕಾಗಿ ಎರಡು ಹಾಡುಗಳು, ಶಿವು ಭೇರಗಿ ಒಂದು ಹಾಡನ್ನು ಬರೆದಿದ್ದಾರೆ.
ಕೃಷ್ಣ ನಾಯ್ಕರ್ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನ, ರಾಜಾ ರಮೇಶ್ ಸಾಹಸ ನಿರ್ದೇಶನ ಹಾಗೂ ಭೂಷಣ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ವೈಜನಾಥ್ ಬಿರಾದಾರ್ ಅವರೊಂದಿಗೆ ಕರಿಸುಬ್ಬು, ಧರ್ಮ, ನೀತು, ಪೂಜಾ, ಅಭಯ್ ವೀರ್, ಪ್ರಶಾಂತ್ ಸಿದ್ದಿ, ಆರ್.ಡಿ. ಬಾಬು, ವಿವೇಕ್ ಜಂಬಗಿ ಹಾಗೂ ಇನ್ನಿತರರು ನಟಿಸಿದ್ದಾರೆ.