ಭಾರತೀಯ ಚಿತ್ರರಂಗ ಕಂಡಂತ ಶ್ರೇಷ್ಠ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಕಳೆದ 15 ದಿನಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸ್ಪಿಬಿ ಶೀಘ್ರ ಗುಣಮುಖರಾಗಿ ವಾಪಸ್ ಬರಲಿ ಎಂದು ದೇಶ ಹಾಗೂ ವಿದೇಶಗಳಲ್ಲಿ ಇರುವ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಇಂದು ಕೂಡಾ ರಿಯಲ್ ಸ್ಟಾರ್ ಉಪೇಂದ್ರ ಎಸ್ಪಿಬಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಅಲ್ಲದೆ ಅವರೊಂದಿಗಿನ ಸುಮಧುರ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಸೂಪರ್ ಸ್ಟಾರ್ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಉಪ್ಪಿ, ಎಸ್ಪಿಬಿ ಅವರು ಭಾರತೀಯ ಚಿತ್ರರಂಗದ ಶ್ರೇಷ್ಠ ಗಾಯಕರು. ಅವರು ಕಲಾಸರಸ್ವತಿ ಪುತ್ರ, ಆದಷ್ಟು ಬೇಗ ಚೇತರಿಸಿ ಕೊಳ್ತಾರೆ. ನಾನು ಇತ್ತೀಚಿಗಷ್ಟೆ ಎಸ್ಪಿಬಿ ಅವರು ಐಸಿಯುನಲ್ಲಿ ಥಮ್ಸ್ ಅಪ್ ಮಾಡಿದ್ದ ಫೋಟೋ ನೋಡಿದೆ. ಅವರಲ್ಲಿದ್ದ ಕಾನ್ಫಿಡೆನ್ಸ್ ನೋಡಿದ್ರೆ ಅವರು ಅದಷ್ಟು ಬೇಗ ಅರೋಗ್ಯವಾಗಿ ವಾಪಸ್ ಬರ್ತಾರೆ. ಅಲ್ಲದೆ ಆ ಭಗವಂತ ಅವರಿಂದ ಇನ್ನೂ ಒಂದಷ್ಟು ಹಾಡುಗಳನ್ನು ಹಾಡಿಸಿ ರಂಜಿಸ್ತಾನೆ ಎಂಬ ನಂಬಿಕೆ ಇದೆ.
ಎಸ್ಪಿಬಿ ಜೊತೆ ನಾನು ಸಾಕಷ್ಟು ಸಮಯ ಕಳೆದಿದ್ದೇನೆ. ಅವರು ಇಲ್ಲಿಯವರೆಗೂ ಎಲ್ಲಾ ಜನರೇಷನ್ ನಟರಿಗೂ ಹಾಡಿದ್ದಾರೆ. ಅವರು ಇಂದಿನ ಗಾಯಕರಿಗೆ ಸ್ಪೂರ್ತಿ. ಎಸ್ಪಿಬಿ ಅವರು ನಮ್ಮ ಸಿನಿಮಾಗೆ ಹಾಡಲೇಬೇಕು ಎಂದು ಡಾ. ವಿಷ್ಣುವರ್ಧನ್ ಪಟ್ಟು ಹಿಡಿಯುತ್ತಿದ್ದರು. ಅವರು ಹಾಡಿದರೆ ಮಾತ್ರ ನಮಗೆ ನಟಿಸಲು ಶಕ್ತಿ ಬರುತ್ತದೆ ಎಂದು ಹೇಳುತ್ತಿದ್ದರು. 'ಬಂಧನ' ಚಿತ್ರದಲ್ಲಿ ವಿಷ್ಣು ನಟಿಸಿರುವ ಪ್ರೇಮದ ಕಾದಂಬರಿ ಹಾಡನ್ನು ಎಸ್ಪಿಬಿ ಬಹಳ ಅದ್ಭುತವಾಗಿ ಹಾಡಿದ್ದಾರೆ. ಒಬ್ಬ ಸಿಂಗರ್ ಈ ರೀತಿ ಹಾಡುತ್ತಾರೆ ಎಂದರೆ ಅದರನ್ನು ಊಹೆ ಮಾಡಲು ಅಸಾಧ್ಯ.
ಎಸ್ಪಿಬಿ ಅವರು ಎಲ್ಲಾ ರೀತಿಯ ಹಾಡುಗಳನ್ನು ಹಾಡಿದ್ದಾರೆ. ಈಗ ನಾವೆಲ್ಲರೂ ಅವರಿಗಾಗಿ ಪ್ರಾರ್ಥನೆ ಮಾಡಬೇಕು. ನಮ್ಮೆಲ್ಲರ ಪ್ರಾರ್ಥನೆ ಅವರು ಗುಣಮುಖರಾಗಿ ವಾಪಸ್ ಬರುವಂತೆ ಮಾಡುತ್ತದೆ ಎಂದು ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.