ಸ್ಯಾಂಡಲ್ವುಡ್ನಲ್ಲಿ ಹೆಚ್ಚಾಗಿ ಹೊಸ ಸಿನಿಮಾ ಬಿಡುಗಡೆಯಾಗದಿದ್ರೂ ಹೊಸ ಸಿನಿಮಾಗಳು ಮಾತ್ರ ಮುಹೂರ್ತ ಆಚರಿಸಿಕೊಳ್ಳುತ್ತಲೇ ಇವೆ. ಸ್ಟಾರ್ ನಟರ ಸಿನಿಮಾದಿಂದ ಹೊಸಬರ ಸಿನಿಮಾಗಳು ಸಾಲು ಸಾಲಾಗಿ ಅನೌನ್ಸ್ ಆಗುತ್ತಲೇ ಇವೆ. ಇದೀಗ ಪ್ರಿಯಾಂಕ ಉಪೇಂದ್ರ, ಪ್ರಿಯಾಮಣಿ ಹಾಗೂ ಛಾಯಾಸಿಂಗ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಖೈಮರಾ ಎಂಬ ಸಿನಿಮಾ ಅನೌನ್ಸ್ ಆಗಿದೆ.
ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಹಾರರ್ ಕಥಾಹಂದರ ಹೊಂದಿರುವ 'ಖೈಮರಾ' ಚಿತ್ರದ ಫಸ್ಟ್ಲುಕ್ ಹಾಗೂ ಟೈಟಲನ್ನು ನಿನ್ನೆ ರಿಯಲ್ ಉಪೇಂದ್ರ ಲಾಂಚ್ ಮಾಡಿ ಪತ್ನಿಯ ಹೊಸ ಚಿತ್ರಕ್ಕೆ ಶುಭ ಕೋರಿದರು. ಚಿತ್ರದ ಬಗ್ಗೆ ಮಾತನಾಡಿದ ಪ್ರಿಯಾಂಕ ಉಪೇಂದ್ರ, ಮಮ್ಮಿ ಚಿತ್ರದ ನಂತರ ಯಾವುದೇ ಹಾರರ್ ಸಿನಿಮಾ ಮಾಡಿಲ್ಲ. ಗೌತಮ್ ಅವರು ಹೇಳಿದ ಕಥೆ ಬಹಳ ಇಷ್ಟವಾಯ್ತು. ಪ್ರಿಯಾಮಣಿ ಹಾಗೂ ಛಾಯಾಸಿಂಗ್ ಜೊತೆ ನಟಿಸುತ್ತಿರುವುದಕ್ಕೆ ಬಹಳ ಖುಷಿಯಾಗುತ್ತಿದೆ ಎಂದರು.
'ಖೈಮರಾ' ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸುತ್ತಿದ್ದಾರೆ. ಪ್ರಿಯಾಂಕ ನಟಿಸಿದ ಮೊದಲ ಚಿತ್ರ 'ರಾ' ಗೆ ನಾನೇ ಸಂಗೀತ ನೀಡಿದ್ದೆ. ಇದೀಗ 20 ವರ್ಷಗಳ ನಂತರ ಅವರ ಚಿತ್ರಕ್ಕೆ ಸಂಗೀತ ನೀಡುತ್ತಿದ್ದೇನೆ ಎಂದು ಗುರುಕಿರಣ್ ಸಂತೋಷ ವ್ಯಕ್ತಪಡಿಸಿದರು. ಚಿತ್ರಕ್ಕೆ ವಿಷ್ಣು ರಾಮಕೃಷ್ಣನ್ ಛಾಯಾಗ್ರಹಣ, ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮೋಹನ್ ಬಿ. ಕೆರೆ ಅವರ ಕಲಾ ನಿರ್ದೇಶನವಿದೆ. ಮತಿಯಲಗಾನ್ ಈ ನಿರ್ಮಾಣ ಮಾಡುತ್ತಿದ್ದು ತಮಿಳು ನಿರ್ದೇಶಕ ವಿ.ಪಿ. ಗೌತಮ್ ನಿರ್ದೇಶಿಸುತ್ತಿದ್ದಾರೆ. ಬೆಂಗಳೂರು ಹಾಗೂ ಕೊಡಗು ಸುತ್ತಮುತ್ತ ನವೆಂಬರ್ 17ರಿಂದ ಚಿತ್ರೀಕರಣ ನಡೆಯಲಿದೆ.