ಕೆಲವೊಂದು ಸಿನಿಮಾಗಳು ಚಿತ್ರರಂಗದ ಇತಿಹಾಸದಲ್ಲಿ ಎಂದೆಂದಿಗೂ ನೆನಪಿನಲ್ಲಿಡುವ ದಾಖಲೆ ಬರೆಯುತ್ತದೆ. ಮೇ 19 ಕ್ಕೆ ಉಪೇಂದ್ರ ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಹಾಗೂ ಪ್ರೇಮ ನಟಿಸಿದ್ದ 'ಓಂ' ಸಿನಿಮಾ ಬಿಡುಗಡೆಯಾಗಿ 25 ವರ್ಷಗಳು ತುಂಬಲಿದೆ. ಈ ಚಿತ್ರ ಪೂರ್ಣಿಮಾ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿತ್ತು.
ಸಿಲ್ವರ್ ಜ್ಯೂಬ್ಲಿ ಆಚರಿಸಿಕೊಳ್ಳುತ್ತಿರುವ 'ಓಂ' ಚಿತ್ರದ ವಿಶೇಷ ಎಂದರೆ ಈ ಸಿನಿಮಾ ಬಿಡುಗಡೆಯಾಗಿ 20 ವರ್ಷಗಳಲ್ಲಿ ಸುಮಾರು 551 ಬಾರಿ ಬಿಡುಗಡೆ ಆಗಿದೆ. ಬಹುಶ: ಇಷ್ಟು ಬಾರಿ ಕನ್ನಡದ ಇತರ ಸಿನಿಮಾಗಳು ಮಾತ್ರವಲ್ಲ ಬೇರೆ ಭಾಷೆಯ ಯಾವುದೇ ಸಿನಿಮಾ ಬಿಡುಗಡೆಯಾಗಿರುವ ಉದಾಹರಣೆಗಳಿಲ್ಲ. ಇದೀಗ 'ಓಂ' ಚಿತ್ರದ 25 ನೇ ವರ್ಷದ ಸಂಭ್ರಮವನ್ನು ಅಭಿಮಾನಿಗಳು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಅರೆ, ಲಾಕ್ಡೌನ್ ಸಮಯದಲ್ಲಿ ಈ ಆಚರಣೆ ಹೇಗೆ ಸಾಧ್ಯ ಎನ್ನಬೇಡಿ. ಮೇ 18 ಹಾಗೂ 19 ರಂದು ಶಿವರಾಜ್ಕುಮಾರ್ ಅಭಿಮಾನಿಗಳು 'ಓಂ' ಚಿತ್ರದ ಕಾಮನ್ ಡಿಪಿ ಬಿಡುಗಡೆ ಮಾಡುತ್ತಿದ್ದಾರೆ. ರಿಷಭ್ ಶೆಟ್ಟಿ, ಯೋಗಿ ಜಿ.ರಾಜ್, ಸಂತೋಷ್ ಆನಂದ್ ರಾಮ್, ಬಹದ್ದೂರ್ ಚೇತನ್, ಸಿಂಪಲ್ ಸುನಿ, ಪವನ್ ಒಡೆಯರ್ ತಾವಿರುವ ಸ್ಥಳದಲ್ಲೇ ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ.
![OM movie celebrating 25th year](https://etvbharatimages.akamaized.net/etvbharat/prod-images/shivarajakumar-om-poster1589620173878-58_1605email_1589620186_929.jpg)
1995 ರಲ್ಲಿ 'ಓಂ' ಚಿತ್ರವನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡುವುದು ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಗೆ ಸುಲಭ ಆಗಿರಲಿಲ್ಲ. 'ಓಂ' ಚಿತ್ರಕ್ಕೆ ಸೆನ್ಸಾರ್ ತಗಾದೆ ತೆಗೆದಿತ್ತು. ಇದರಿಂದ ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್ ಅವರಿಗೆ ಬೇಸರ ಕೂಡಾ ಆಗಿತ್ತು. ರಕ್ತಪಾತ, ಚುಂಬನ ದೃಶ್ಯಗಳ ಬಗ್ಗೆ ಸೆನ್ಸಾರ್ನಲ್ಲಿ ಆಕ್ಷೇಪ ಇತ್ತು. ಸೆನ್ಸಾರ್ ಮಂಡಳಿಯಲ್ಲಿದ್ದ ಆಗಿನ ಹಿರಿಯ ಪತ್ರಕರ್ತರ ವಿರುದ್ಧ ಪಾರ್ವತಮ್ಮ ರಾಜ್ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದರು.
ಅದೇನೇ ಆದರೂ ಉಪೇಂದ್ರ ನಿರ್ದೇಶನದ ಈ ಸಿನಿಮಾ ದೊಡ್ಡ ಮಟ್ಟಿಗೆ ಸದ್ದು ಮಾಡಿತ್ತು. ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಕೂಡಾ ಆಯ್ತು. ಸೆನ್ಸಾರ್ ಮಾತು ಆಗ ಗಮನಕ್ಕೆ ಬರಲಿಲ್ಲ. ಬಹಳ ರಾ ಆಗಿ ಉಪೇಂದ್ರ ತೋರಿಸಿದ ದೃಶ್ಯಗಳು ಭೂಗತ ಲೋಕಕ್ಕೂ ಕೂಡಾ ಇಷ್ಟ ಆಗಿತ್ತು. ಕೇವಲ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿ ಕೂಡಾ 'ಓಂ' ಸದ್ದು ಮಾಡಿತ್ತು. ಮೊದಲ ಬಾರಿಗೆ ಬಿಡುಗಡೆಯಾದಾಗಿನಿಂದ ಇಲ್ಲಿವರೆಗೂ 'ಓಂ' ಸಿನಿಮಾ ಪ್ರತಿ ಬಾರಿ ಲಾಭ ಮಾಡುತ್ತಲೇ ಇದೆ. 'ಕಪಾಲಿ' ಚಿತ್ರಮಂದಿರದಲ್ಲಂತೂ ಇದೇ ಚಿತ್ರದ ಪೋಸ್ಟರ್ ಯಾವಾಗಲೂ ರಾರಾಜಿಸುತ್ತಿತ್ತು.
![OM movie celebrating 25th year](https://etvbharatimages.akamaized.net/etvbharat/prod-images/om-muhurut-clap-by-dr-raj--shiv-and-prema1589620173148-43_1605email_1589620186_1003.jpg)
ವಿಶೇಷ ಎಂದರೆ 'ಓಂ' ಚಿತ್ರದ ಕಥೆಯನ್ನು ಉಪೇಂದ್ರ ಅವರು ಕಾಲೇಜು ದಿನಗಳಲ್ಲಿ ಬರೆದಿದ್ದು. ಆದರೆ ಈ ಕಥೆಯಲ್ಲಿ 'ಪಾಪಿಗಳ ಲೋಕದಲ್ಲಿ' ವಾರ ಪತ್ರಿಕೆಯಲ್ಲಿ ಪ್ರಸಾರವಾದ ಕೆಲವೊಂದು ಅಂಶಗಳಿವೆ. ಇದು ಉಪೇಂದ್ರ ಅವರ 3 ನೇ ನಿರ್ದೇಶನದ ಸಿನಿಮಾ. ಇದಕ್ಕೆ ಮುನ್ನ ‘ತರ್ಲೆ ನನ್ಮಗ’ ಹಾಗೂ 'ಶ್' ಚಿತ್ರವನ್ನು ಉಪೇಂದ್ರ ನಿರ್ದೇಶನ ಮಾಡಿದ್ದರು.
ಮೊದಲಿಗೆ ‘ಓಂ’ಚಿತ್ರಕ್ಕೆ ನಾಯಕನಾಗಿ ಆಯ್ಕೆ ಆಗಿದ್ದವರು ಕುಮಾರ್ ಗೋವಿಂದ್. ಆದರೆ ಕಾರಣಾಂತರಗಳಿಂದ ಕುಮಾರ್ ಗೋವಿಂದ್ ಈ ಪಾತ್ರ ಮಾಡಲಿಲ್ಲ. ನಂತರ ಶಿವರಾಜ್ಕುಮಾರ್ ಈ ಪಾತ್ರದಲ್ಲಿ ನಟಿಸಿದರು. ಇನ್ನು ನಾಯಕಿ ಪಾತ್ರಕ್ಕೆ ಬಾಲಿವುಡ್ ನಟಿ ಜೂಹಿ ಚಾವ್ಲಾ ಹೆಸರು ಕೇಳಿಬಂದಿತ್ತು. ಆದರೆ ಡಾ. ರಾಜ್ಕುಮಾರ್ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಈ ಚಿತ್ರಕ್ಕೆ ಆಯ್ಕೆ ಮಾಡಿದ್ದು ಕೊಡಗಿನ ಬೆಡಗಿ ಪ್ರೇಮ ಅವರನ್ನು. ಒಟ್ಟಿನಲ್ಲಿ ಈ ಚಿತ್ರ ಶಿವಣ್ಣ, ಉಪೇಂದ್ರ ಹಾಗೂ ಪ್ರೇಮ ಅವರಿಗೆ ಹೆಸರು ತಂದುಕೊಟ್ಟಿದಂತೂ ನಿಜ.
ಇನ್ನು ಈ ಚಿತ್ರದಲ್ಲಿ ಅಸಲಿ ರೌಡಿಗಳಾದ ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಕೃಷ್ಣ, ತನ್ವೀರ್ ಅಹಮದ್, ಜೇಡರಹಳ್ಳಿ ಕೃಷ್ಣ ಅವರೇ ತಮ್ಮ ತಮ್ಮ ಪಾತ್ರಗಳನ್ನು ನಿಭಾಯಿಸಿದ್ದರು. ಅಜಯ್ ಎಂಬುವರು ಶ್ರೀರಾಂಪುರ ಕಿಟ್ಟಿ ಪಾತ್ರ ಮಾಡಿದ್ದರು. 'ಹೇ ದಿನಕರ ಶುಭಕರ....ಹಾಡನ್ನು ‘ಓಂ’ ಶೀರ್ಷಿಕೆಗೆ ತಕ್ಕಂತೆ ಬಳಸಬಹುದು ಎಂದು ಡಾ. ರಾಜ್ಕುಮಾರ್ ಅವರು ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ತಿಳಿಸಿ ನಂತರ ತಾವೇ ಆ ಹಾಡನ್ನು ಕೂಡಾ ಹಾಡಿದ್ದರು.
ಸೋನಿ ಮ್ಯೂಸಿಕ್ ಸಂಸ್ಥೆ ಈ ಚಿತ್ರದ ಹಾಡುಗಳ ಹಕ್ಕನ್ನು ಪಡೆದುಕೊಂಡಿತ್ತು. ‘ಓಂ’ ತೆಲುಗು ಭಾಷೆಯಲ್ಲಿ 1997 ರಲ್ಲಿ 'ಓಂಕಾರಮ್' ಹೆಸರಿನಲ್ಲಿ ತಯಾರಾಗಿತ್ತು. ತೆಲುಗು ಭಾಷೆಯಲ್ಲಿ ಕೂಡಾ ಉಪೇಂದ್ರ ಅವರೇ ಚಿತ್ರವನ್ನು ನಿರ್ದೇಶಿಸಿದ್ದರು. 1999 ರಲ್ಲಿ ‘ಸತ್ಯ’ ಹೆಸರಿನಲ್ಲಿ ಹಿಂದಿ ಭಾಷೆಯಲ್ಲಿ ಬಿಡುಗಡೆ ಆದ ಸಿನಿಮಾ ‘ಓಂ’ ರೀಮೇಕ್ ಎಂದು ಹೇಳಲಾಗುತ್ತಿದೆ.
ಚಿತ್ರಕ್ಕೆ ರಕ್ಷಿತಾ ತಂದೆ ದಿವಂಗತ ಬಿ.ಸಿ. ಗೌರಿ ಶಂಕರ್ ಛಾಯಾಗ್ರಹಣ, ಟಿ. ಶಶಿಕುಮಾರ್ ಸಂಕಲನ , ಮುರಳಿ ಮೋಹನನ್ ಸಂಭಾಷಣೆ ಇದೆ. ಶ್ರೀಶಾಂತಿ, ಉಪಾಸನೆ ಸೀತಾರಾಮ್, ಜಿ.ವಿ. ಶಿವಾನಂದ್, ಹೊನ್ನವಳ್ಳಿ ಕೃಷ್ಣ, ಸಾಧು ಕೋಕಿಲ, ವಿ. ಮನೋಹರ್, ವಾಣಿಶ್ರೀ, ಸಂಧ್ಯ, ಮೈಕಲ್ ಮಧು ಹಾಗೂ ಇತರರು ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.