ಈಗ ಎಲ್ಲೆಲ್ಲೂ ಕೊರೊನಾ ಆತಂಕ ಇದ್ದು ಜನರು ಭಯದಿಂದ ಜೀವಿಸುವಂತಾಗಿದೆ. ಸಾರ್ವಜನಿಕ ಸ್ಥಳಗಳಿಗೆ ಹೋಗಲು ಯೋಚಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಕಾರಣದಿಂದ ಜನರು ಸಿನಿಮಾ ನೋಡಲು ಕೂಡಾ ಹೋಗಲು ಹೆದರುತ್ತಿದ್ದಾರೆ.
ಕೊರೊನಾ ಸಮಸ್ಯೆ ಬಗೆಹರಿಯುವವರೆಗೂ ನಿರ್ಮಾಪಕರು ಚಿತ್ರವನ್ನು ಬಿಡುಗಡೆ ಮಾಡಬೇಡಿ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಕನ್ನಡ ಚಿತ್ರ ನಿರ್ಮಾಪಕರಲ್ಲಿ ಮನವಿ ಮಾಡಿದ್ದಾರೆ. ಒಂದೆಡೆ ಜನರು ಕೊರೊನಾ ಭಯದಿಂದ ಚಿತ್ರರಂಗಕ್ಕೆ ಬರಲು ಹೆದರುತ್ತಿದ್ದರೆ, ಮತ್ತೊಂದೆಡೆ ಜನರು ಥಿಯೇಟರ್ಗೆ ಬಾರದೆ ಟಾಲಿವುಡ್, ಬಾಲಿವುಡ್ ಚಿತ್ರರಂಗ ನಷ್ಟ ಅನುಭವಿಸುತ್ತಿದೆ. ಜನರಿಲ್ಲದೆ ಥಿಯೇಟರ್ ಕೂಡಾ ಬಿಕೋ ಎನ್ನುತ್ತಿದೆ. ಈ ಸಮಸ್ಯೆ ಗಾಂಧಿನಗರದಲ್ಲೂ ಕಾಣಿಸಿಕೊಂಡಿದ್ದು ಈ ಸಮಸ್ಯೆಗೆ ಸೂಕ್ತ ಪರಿಹಾರ ಸಿಗುವವರೆಗೂ ನಿರ್ಮಾಪಕರು ಸ್ವಲ್ಪ ತಾಳ್ಮೆವಹಿಸಬೇಕಾಗಿದೆ ಎಂದು ಉಮೇಶ್ ಬಣಕಾರ್ ಹೇಳಿದ್ದಾರೆ.
ಮುಂದಿನ ತಿಂಗಳು ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗಬೇಕಿದ್ದು ಆ ವೇಳೆ ಕೊರೊನ ಎಫೆಕ್ಟ್ ಮತ್ತಷ್ಟು ಹೆಚ್ಚಾಗಬಹುದು. ಏರ್ ಪೋರ್ಟ್ಗಳಲ್ಲೂ ಇದರ ಬಿಸಿ ತಟ್ಟಿದ್ದು ಮುಂದಿನ ದಿನಗಳಲ್ಲಿ ಇದರ ಪರಿಣಾಮ ಇನ್ನೂ ಭಯಂಕರವಾಗಿರುತ್ತದೆ. ಆದ್ದರಿಂದ ಈ ಸಮಸ್ಯೆ ಬಗೆಹರಿಯುವರೆಗೂ ಚಿತ್ರಗಳನ್ನು ಬಿಡುಗಡೆ ಮಾಡಬೇಡಿ ಎಂದು ಉಮೇಶ್ ಬಣಕಾರ್ ನಿರ್ಮಾಪಕರಲ್ಲಿ ಮನವಿ ಮಾಡಿದ್ದಾರೆ. ಈಗಾಗಲೇ ನಾವು ಕೆಲವು ನಿರ್ಮಾಪಕರಿಗೆ ಕರೆ ಮಾಡಿ ಮಾತನಾಡಿದ್ದೇವೆ. ಇಷ್ಟಾದ ನಂತರವೂ ನಾವು ಸಿನಿಮಾ ಬಿಡುಗಡೆ ಮಾಡೇ ಮಾಡುತ್ತೇವೆ ಎಂದಾದಲ್ಲಿ ನಾನು ಮತ್ತೇನೂ ಹೇಳಲು ಸಾಧ್ಯವಿಲ್ಲ ಎಂದು ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್ ಹೇಳಿದರು.