ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯ ವಿಶ್ವ ವಿಖ್ಯಾತರಾಗಿದ್ದು ಅವರ ನಾಟಕಗಳಿಂದ. ದೇವದಾಸಿ, ಭ್ರಷ್ಟಾಚಾರ, ಲಂಚಾವತಾರ, ಮಕ್ಮಲ್ ಟೋಪಿ, ಡಬಲ್ ತಾಳಿ, ಫೋನಾವತಾರ, ಕನ್ಯಾ ದಾನ, ಚಮಚಾವತಾರ, ಹಾಸ್ಯದಲ್ಲಿ ಉಲ್ಟಾ ಪಲ್ಟಾ...ಹೀಗೆ ಅನೇಕ ನಾಟಕಗಳಲ್ಲಿ ಅಭಿನಯಿಸಿ ಜಗಜ್ಜಾಹಿರಾದವರು. ಇವರ ಲಂಚಾವತಾರ ನಾಟಕ 11,000 ಪ್ರದರ್ಶನ ಕಂಡು ದಾಖಲೆ ಬರೆದಿತ್ತು.
ಆಗಿನ ಕಾಲದಲ್ಲೇ ಇವರು ಮಾಡಿದ್ದ ‘ದೇವದಾಸಿ’ ಸಿನಿಮಾ ಇಂದಿಗೂ ಪ್ರಸ್ತುತ. ಈ ಚಿತ್ರದ ಒಂದು ಹಾಡು ‘ಸುಖವೇವ ಸುರ ಪಾನವಿದು ಸ್ವರ್ಗ ಸಮಾನಮ್....' ಇಂದು ಕನ್ನಡದ ‘ಬಟ ರ್ಫ್ಲೈ’ ಚಿತ್ರದಲ್ಲಿ ಮರುಬಳಕೆಯಾಗುತ್ತಿದೆ. ಇದಕ್ಕೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಕಂಠದಾನ ಮಾಡಿದ್ದಾರೆ. ಮಾಸ್ಟರ್, 40 ಸಿನಿಮಗಳಲ್ಲೂ ಮನೋಜ್ಞ ಅಭಿನಯ ನೀಡಿದ್ದಾರೆ. ಅವರ ಇತ್ತೀಚಿನ ಸಿನಿಮಾಗಳೆಂದರೆ ನಿರಂತರ, ಯಕ್ಷ, ಸಮರ್ಥ ಸದ್ಗುರು, ಮತ್ತೆ ಸತ್ಯಾಗ್ರಹ, ಕೇರ್ ಆಫ್ ಫುಟ್ಪಾತ್-2 ಹಾಗು ರೇ.
ಮಾಸ್ಟರ್ ಹಿರಣ್ಣಯ್ಯ 'ಮಾತಿನ ಮಲ್ಲ' ಎಂದು ಜನಪ್ರೀಯತೆ ಗಳಿಸಿದವರು. ಇವರ ನಾಟಕಗಳನ್ನು ನೋಡಲು ಬಂದವರು 'ಇವತ್ತು ಯಾವ ಮಂತ್ರಿಗೆ ಚಳಿ ಬಿಡಿಸುತ್ತಾರೆ' ಅಂತ ಕಾಯುತ್ತಿದ್ದರು.
ಕಲಾರಂಗದಲ್ಲಿ 50 ವರ್ಷದ ಸೇವೆಗಾಗಿ ಮಾಸ್ಟರ್ ಹಿರಣ್ಣಯ್ಯ ಅವರಿಗೆ 'ಅನಕೃ ಪ್ರಶಸ್ತಿ' ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಂದಿನ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಮಂತ್ರಿ ಉಮಾಶ್ರೀ ಅಭಿನಂದನೆ ಸಲ್ಲಿಸಿ ಮಾತನಾಡುತ್ತಾ,'ನಾನು ಮಾಸ್ಟರ್ ಅವರ ನಾಟಕಗಳನ್ನು ನೋಡುತ್ತಾ ಬೆಳದವಳು. ಒಂದು ಪುಟ್ಟ ಅಂಗಡಿಯಲ್ಲಿ ನಾನು ಕೆಲಸ ಮಾಡುತ್ತಿದ್ದೆ. ಅವರಿಗೆ ನನ್ನ ಕೈಯಾರೆ ಸಿಗರೇಟ್ ತಂದು ಕೊಟ್ಟಿದ್ದ ದಿವಸಗಳು ಉಂಟು ಎಂದು ಉಮಾಶ್ರೀ ಹೇಳಿಕೊಂಡಿದ್ದರು.ಹಿರಣ್ಣಯ್ಯ ಅವರ ನಾಟಕಗಳು ಯಾವಾಗ ಬ್ಯಾನ್ ಅಂತ ಘೋಷಣೆ ಆಯಿತೋ, ನಾನು ಕೆಲಸ ಮಾಡುತ್ತಾ ಇದ್ದ ಪುಟ್ಟ ಅಂಗಡಿಯೂ ಮಾಯವಾಯಿತು ಎಂದು ಸ್ಮೃತಿಪಟಲದಲ್ಲಿ ದಾಖಲಾಗಿದ್ದ ನೆನಪುಗಳನ್ನು ಹೊರಚೆಲ್ಲಿದರು.
ಅಭಿನಂದನೆಯನ್ನು ಸ್ವೀಕರಿಸಿ ಮಾಸ್ಟರ್ ಹಿರಣ್ಣಯ್ಯ ಅವರು ಅ.ನ ಕೃಷ್ಣ ರಾಯರನ್ನು ಮನಸಾರೆ ಕೊಂಡಾಡಿದ್ದರು. 'ನಾನು ಜೀವನದಲ್ಲಿ ಜಿಗುಪ್ಸೆ ಹೊಂದಿದಾಗ ಈ ಮಹಾನುಭಾವ ನನಗೆ 5,000 ರೂಪಾಯಿ ನೀಡಿ ಸಹಾಯ ಮಾಡಿದ್ದರು. ನಾನೇನಾದರೂ ಇಂದು ಅನ್ನ ತಿನ್ನುತ್ತಿದ್ದೇನೆ ಅಂದರೆ ಅದಕ್ಕೆ ಕಾರಣ ಅನಕೃ. ಅವರ ಹೆಸರಿನಿಂದ ನನಗೆ ಅಭಿನಂದನೆಗೆ ? ಏನು ಹೇಳಲಿ ಎಂದು ಗದ್ಗತಿರಾಗಿದ್ದರು. ನಾನು ಮೇಕಪ್ ಹಾಕಲು ಗುಬ್ಬಿ ವೀರಣ್ಣ ಅವರು ಸಹ ಕಾರಣ ಎಂದು ಹೇಳಿಕೊಂಡಿದ್ದರು ಮಾಸ್ಟರ್ ಹಿರಣ್ಣಯ್ಯ. ಇಂಥ ಮೇರು ವ್ಯಕ್ತಿತ್ವದ ಸುಂದರ ನೆನಪುಗಳು ಜನಮಾನಸದಲ್ಲಿ ಯಾವತ್ತಿಗೂ ಅಜರಾಮರವಾಗಿರುತ್ತವೆ.