ಕನ್ನಡ, ತಮಿಳು, ತೆಲುಗು 3 ಭಾಷೆಗಳಲ್ಲಿ ತಯಾರಾಗಿರುವ ಹಿರಿಯ ನಟಿ ಲಕ್ಷ್ಮಿ , ಸಾಧು ಕೋಕಿಲ, ಅಚ್ಯುತ್ ರಾವ್ ಹಾಗೂ ಸುರೇಶ್ ಹೆಬ್ಳಿಕರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ತ್ರಿಕೋನ' ಚಿತ್ರದ ಬಿಡುಗಡೆಗೆ ಸೆನ್ಸಾರ್ ಬೋರ್ಡ್ ಅನುಮತಿ ನೀಡಿದೆ.
ಪೊಲೀಸ್ ಪ್ರಕ್ಕಿ ಪ್ರೊಡಕ್ಷನ್ಸ್ ಲಾಂಛನದಡಿ ರಾಜಶೇಖರ್ ನಿರ್ಮಾಣದಲ್ಲಿ ಚಂದ್ರಕಾಂತ್ ನಿರ್ದೇಶನ ಮಾಡಿರುವ 'ತ್ರಿಕೋನ` ಚಿತ್ರಕ್ಕೆ ಯಾವುದೇ ಕಟ್, ಮ್ಯೂಟ್ ಇಲ್ಲದೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ಮಾಪಕ ರಾಜಶೇಖರ್ ಅವರೇ ಕಥೆ ಬರೆದಿದ್ದಾರೆ. ಸದ್ಯಕ್ಕೆ 'ತ್ರಿಕೋನ' ಚಿತ್ರಕ್ಕೆ ಕನ್ನಡದಲ್ಲಿ ಮಾತ್ರ ಸೆನ್ಸಾರ್ ಆಗಿದ್ದು, ತೆಲುಗು, ತಮಿಳಿನಲ್ಲೂ ಶೀಘ್ರದಲ್ಲೇ ಸೆನ್ಸಾರ್ ಆಗಲಿದೆ. ಮೂರೂ ಭಾಷೆಗಳಲ್ಲೂ ವಿಭಿನ್ನ ಚಿತ್ರಕಥೆಯೊಂದಿಗೆ 'ತ್ರಿಕೋನ' ಸಿನಿಮಾ ನಿರ್ಮಾಣವಾಗಿದೆ. ನಿರ್ದೇಶಕರು ಹೊರತುಪಡಿಸಿ ಆಯಾ ಭಾಷೆಗಳಲ್ಲಿ ಅಲ್ಲಿನ ನುರಿತ ತಂತ್ರಜ್ಞರೇ ಕಾರ್ಯ ನಿರ್ವಹಿಸಿದ್ದಾರೆ.
ಸರ್ಕಾರದ ಅನುಮತಿ ದೊರೆತ ಕೂಡಲೇ ಸೆನ್ಸಾರ್ ಆಗಿರುವ 'ತ್ರಿಕೋನ' ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಎಲ್ಲಾ ತಯಾರಿ ಮಾಡಿಕೊಂಡಿದೆ. ಚಿತ್ರದ ಹಾಡುಗಳಿಗೆ ಸುರೇಂದ್ರನಾಥ್ ಸಂಗೀತ ನೀಡಿದ್ದಾರೆ. ಶ್ರೀನಿವಾಸ್ ವೆನಕೋಟ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಪ್ರೇಕ್ಷಕ ಪ್ರಭುಗಳು ಈ ಸಿನಿಮಾಗೆ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಕಾದು ನೋಡಬೇಕು.