ರಾಧಿಕಾ ಕುಮಾರಸ್ವಾಮಿ ಅಭಿನಯದ 'ಭೈರಾದೇವಿ' ಸಿನಿಮಾ ಶೂಟಿಂಗ್ ಮುಗಿದಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ನಿರತವಾಗಿದೆ. ಸದ್ಯಕ್ಕೆ ಚಿತ್ರದ ಡಬ್ಬಿಂಗ್ ನಡೆಯುತ್ತಿದೆ.
ಚಿತ್ರದಲ್ಲಿ ರಾಧಿಕಾ ಇದೇ ಮೊದಲ ಬಾರಿಗೆ ಅಘೋರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸ್ಯಾಂಡಲ್ವುಡ್ ಇತಿಹಾಸದಲ್ಲೇ ಇದು ಹೊಸ ಪ್ರಯತ್ನ ಎನ್ನಬಹುದು. ಅವರ ಪಾತ್ರಕ್ಕೆ ಅನುಗುಣವಾಗಿ ಧ್ವನಿ ನೀಡಲು ನಿರ್ದೇಶಕ ಶ್ರೀ ಜೈ ಹೊಸ ಪ್ರಯತ್ನ ಮಾಡಿದ್ದಾರೆ. ಮಂಗಳಮುಖಿಯೊಬ್ಬರಿಂದ ಈ ಪಾತ್ರಕ್ಕೆ ಡಬ್ ಮಾಡಿಸಲಾಗುತ್ತಿದೆ.
ಇಂದು ಐವರು ಮಂಗಳಮುಖಿಯರನ್ನು ಕರೆಸಿ ಅವರ ವಾಯ್ಸ್ ಟೆಸ್ಟ್ ಮಾಡಿಸಿದ್ದಾರೆ. ಅವರಲ್ಲಿ ಭೂಮಿಕ ಎಂಬುವರ ಧ್ವನಿ ರಾಧಿಕಾ ಪಾತ್ರಕ್ಕೆ ಹೊಂದಿಕೆಯಾಗಿದೆ ಎನ್ನಲಾಗಿದೆ. ಇನ್ನು ಭೂಮಿಕ ಅವರಿಗೆ ತರಬೇತಿ ನೀಡಿ ಡಬ್ಬಿಂಗ್ ಆರಂಭಿಸುವುದಾಗಿ ನಿರ್ದೇಶಕ ಹೇಳಿದ್ದಾರೆ. ಡಬ್ಬಿಂಗ್ ಮಾಡಲು ಅವಕಾಶ ನೀಡಿದ್ದಕ್ಕೆ ಭೂಮಿಕ ಕೂಡಾ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.