ನವರಸನಾಯಕ ಜಗ್ಗೇಶ್ ರೈತನ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ ತೋತಾಪುರಿ. ಸಿನಿಮಾ ಚಿತ್ರೀಕರಣ ಕಳೆದ ಒಂದು ವಾರದಿಂದ ಮೈಸೂರಿನಲ್ಲಿ ನಡೆಯುತ್ತಿತ್ತು. ಮೈಸೂರಿನಲ್ಲಿ ಮದುವೆ ದೃಶ್ಯಗಳನ್ನು ಚಿತ್ರೀಕರಿಸಿಕೊಂಡ ನಿರ್ದೇಶಕ ವಿಜಯ ಪ್ರಸಾದ್ ಇದೀಗ ಚಿತ್ರತಂಡವನ್ನು ಕೇರಳಕ್ಕೆ ಶಿಫ್ಟ್ ಮಾಡಿದ್ದಾರೆ.
ಚಿತ್ರದಲ್ಲಿ ಅದಿತಿ ಪ್ರಭುದೇವ ಮುಸ್ಲಿಂ ಯುವತಿ ಪಾತ್ರದಲ್ಲಿ, ದತ್ತಣ್ಣ ಮುಸ್ಲಿಂ ವೃದ್ಧನ ಪಾತ್ರದಲ್ಲಿ, ಸುಮನ್ ರಂಗನಾಥ್ ಕ್ರೈಸ್ತ ಸಮುದಾಯದ ಯುವತಿಯಾಗಿ ನಟಿಸುತ್ತಿದ್ದಾರೆ. ಮೊನ್ನೆವರೆಗೂ ಮೈಸೂರಿನಲ್ಲಿ ನಡೆಯುತ್ತಿದ್ದ ಚಿತ್ರೀಕರಣ ಕೇರಳಕ್ಕೆ ಶಿಫ್ಟ್ ಆಗಿದೆ. ಅಷ್ಟೇ ಅಲ್ಲ, ತೋತಾಪುರಿ ಸಿನಿಮಾ ಅಡ್ಡಾಕ್ಕೆ ಹೊಸ ಸ್ಟಾರ್ ಎಂಟ್ರಿಯಾಗಿದೆ. ಡಾಲಿ ಧನಂಜಯ್ ಈಗ ತೋತಾಪುರಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಧನಂಜಯ್ ಯಾವ ಪಾತ್ರ ಮಾಡುತ್ತಿದ್ದಾರೆ ಎಂಬುದು ಮಾತ್ರ ಇನ್ನೂ ತಿಳಿದುಬಂದಿಲ್ಲ.
ಇದನ್ನೂ ಓದಿ: 'ಗಾಂಧಿಗಿರಿ'ಗೂ ಮುನ್ನ ಮತ್ತೊಂದು ಚಿತ್ರಕ್ಕಾಗಿ ಬಣ್ಣ ಹಚ್ಚುತ್ತಿರುವ ರಾಗಿಣಿ
ನಿರ್ದೇಶಕ ವಿಜಯ್ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿರುವ 'ತೋತಾಪುರಿ' ಚಿತ್ರಕ್ಕೆ, ಅನೂಪ್ ಸೀಳೀನ್ ಸಂಗೀತ ಸಂಯೋಜಿಸಿದ್ದಾರೆ. ಗೋವಿಂದಾಯಾ ನಮಃ ಹಾಗೂ ಶಿವಲಿಂಗದಂತ ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದ ನಿರ್ಮಾಪಕ ಕೆ.ಎ. ಸುರೇಶ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕೇರಳದಲ್ಲಿ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗುತ್ತಿದ್ದು ಏಪ್ರಿಲ್ ವೇಳೆಗೆ ಮೊದಲ ಭಾಗವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.