ವಾಷಿಂಗ್ಟನ್: ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಸುಮಾರು 6 ತಿಂಗಳ ನಂತರ ಅಮೆರಿಕನ್ ಸಿನಿಮಾ ನಟ ಟಾಮ್ ಹ್ಯಾಂಕ್ಸ್ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇದರಿಂದಾಗಿ ಅಮೆರಿಕನ್ ಸಂಗೀತಗಾರ ಎಲ್ವೀಸ್ ಪ್ರೆಸ್ಲಿ ಅವರ ಬಯೋಪಿಕ್ ಕುರಿತ ಚಿತ್ರದ ಕೆಲಸಗಳು ಮುಂದುವರೆಯುತ್ತಿವೆ. ವೆರೈಟಿ ಎಂಬ ಮನರಂಜನಾ ನಿಯತಕಾಲಿಕದ ಪ್ರಕಾರ ಸ್ಥಗಿತಗೊಂಡಿದ್ದ ಸಿನಿಮಾ ಮತ್ತೆ ಆರಂಭವಾಗಲಿದೆ ಎಂದು ನಿರ್ದೇಶಕ ಬಝ್ ಲುಹರ್ಮನ್ ಸ್ಪಷ್ಟನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಟಾಮ್ ಹ್ಯಾಂಕ್ಸ್ ಆಸ್ಟ್ರೇಲಿಯಾಗೆ ವಾಪಸ್ ಬರಲಿದ್ದಾರೆ.
ನಾವು ಮತ್ತೆ ಬರುತ್ತಿದ್ದು, ಟಾಮ್ ಹ್ಯಾಂಕ್ಸ್ ಆಸ್ಟ್ರೇಲಿಯಾಗೆ ಬರುತ್ತಿದ್ದಾರೆ. ಅಸ್ಟ್ರೇಲಿಯಾದಲ್ಲಿ ನಟ ಆಸ್ಟಿನ್ ಬಟ್ಲರ್ ಅವರ ಜೊತೆಗೂಡಲಿದ್ದಾರೆ. ಕೆಲವೇ ದಿನಗಳಲ್ಲಿ ಸಿನಿಮಾ ಚಿತ್ರೀಕರಣವನ್ನು ಮುಂದುವರೆಸುತ್ತೇವೆ ಎಂದು ವೆರೈಟಿಗೆ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ವಾರ್ನರ್ ಬ್ರದರ್ಸ್ ಪ್ರೊಡಕ್ಷನ್ನಲ್ಲಿರುವ ಸಿನಿಮಾವನ್ನು ಕೊರೊನಾ ಕಾರಣದಿಂದ ಮಾರ್ಚ್ನಲ್ಲಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಕ್ವೀನ್ಸ್ಲ್ಯಾಂಡ್ನಲ್ಲಿ ಸೆಪ್ಟೆಂಬರ್ 23ರಿಂದ ಮತ್ತೆ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.
ನಾವು ತುಂಬಾ ಅದೃಷ್ಟವಂತರು. ಈ ಸಿನಿಮಾಗೆ ಕ್ವೀನ್ಸ್ಲ್ಯಾಂಡ್ ರಾಜ್ಯದ ತಾಣಗಳು ಈಗ ಹೇಳಿ ಮಾಡಿಸಿದಂತಿವೆ ಎಂದು ನಿರ್ದೇಶಕ ಲುಹರ್ಮನ್ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕ್ವೀನ್ಸ್ಲ್ಯಾಂಡ್ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಎಲ್ವೀಸ್ ಆ್ಯರನ್ ಪ್ರೆಸ್ಲಿ ಅಮೆರಿಕದ ಪ್ರಸಿದ್ಧ ಸಂಗೀತಗಾರರಾಗಿದ್ದು, ಅವರ ಬಯೋಪಿಕ್ನ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಚಿತ್ರಕ್ಕೆ ಇನ್ನೂ ಯಾವುದೇ ಹೆಸರಿಟ್ಟಿಲ್ಲ.