ಜೂನ್ 14ರಂದು ತೆಲುಗು-ಕನ್ನಡ ಭಾಷೆಯಲ್ಲಿ ಏಕಕಾಲದಲ್ಲೇ ಈ ಚಿತ್ರ ತೆರೆಗೆ ಬರಲಿದೆ. ಈಗಾಗಲೇ ಕನ್ನಡದ ಅವತರಣಿಕೆಗೆ ಆಡಿಯೋ ರಿಲೀಸ್ ಆಗಿದೆ. ಇಂದು ವಿಶಾಖಪಟ್ಟಣಂ ಕಡಲ ತೀರದಲ್ಲಿ ತೆಲುಗು ಪ್ರಿನ್ಸ್ ಮಹೇಶ್ ಬಾಬು ಅವರು ತೆಲುಗು ಆವೃತ್ತಿ ‘ಐ ಲವ್ ಯು’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿ ಕನ್ನಡ ‘ಐ ಲವ್ ಯು’ ಚಿತ್ರದ ಒಂದು ಹಾಡನ್ನು ಅನಾವರಣಗೊಳಿಸಲಿದ್ದಾರೆ.
ಇನ್ನು ಎಲ್ಲೆಡೆ ಸೂಪರ್ ಸ್ಟಾರ್ ಉಪ್ಪಿ ಅವರ 'ಐ ಲವ್ ಯು' ಸಿನಿಮಾ ಜ್ವರ ಜೋರಾಗಿದೆ. ಈಗಾಗಲೇ ಚಿತ್ರದ ದೊಡ್ಡ ಕಟೌಟ್, ಬ್ಯಾನರ್ಗಳು ತಯಾರಾಗುತ್ತಿವೆ. ಇದೀಗ ಬುದ್ಧಿವಂತನ ಅಭಿಮಾನಿಗಳ ಪಡೆ ಜನ ಮೆಚ್ಚುವ ಕಾರ್ಯಕ್ಕೆ ಮುಂದಾಗಿದೆ.
ಇಂದು ಉಪೇಂದ್ರ ಅಭಿಮಾನಿಗಳು ಒಂದು ದೊಡ್ಡ ಕಟೌಟ್ ತಯಾರಿಸಿದ್ದಾರೆ. ಜೂನ್ 10ರಂದು ಈ ಕಟೌಟ್ಗೆ ಅಣ್ಣಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಿಸಿ, ತ್ರಿವೇಣಿ ಚಿತ್ರಮಂದಿರದ ಎದುರು ತಂದು ನಿಲ್ಲಿಸಲಿದ್ದಾರೆ. ಬಳಿಕ ಅದನ್ನು ಹರಾಜು ಹಾಕಲಿದ್ದು, ಇದರಿಂದ ಬಂದ ಹಣ ಅನಾಥಾಶ್ರಮಕ್ಕೆ ನೀಡಲು ತೀರ್ಮಾನಿಸಿದ್ದಾರೆ.
ಆರ್. ಚಂದ್ರು ನಿರ್ದೇಶನದಲ್ಲಿ ಉಪೇಂದ್ರ, ರಚಿತಾ ರಾಮ್ ಅಭಿನಯದ ಈ ಚಿತ್ರ ಕರ್ನಾಟಕದಲ್ಲಿ (400) ಹಾಗೂ ಆಂಧ್ರ-ತೆಲಂಗಾಣದಲ್ಲಿ 200 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.