'ಫ್ಯಾಂಟಮ್' ಚಿತ್ರೀಕರಣಕ್ಕಾಗಿ ಹೈದರಾಬಾದ್ಗೆ ತೆರಳಿದ್ದ ಸುದೀಪ್ ಬಿಡುವಿನ ಸಮಯದಲ್ಲಿ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿ ಬಂದಿದ್ದರು. ಪವನ್ ಕಲ್ಯಾಣ್ ಜೊತೆ ಸುದೀಪ್ ನಟಿಸುತ್ತಿದ್ದಾರೆ, ಅದಕ್ಕಾಗಿ ಈ ಭೇಟಿ ಎನ್ನಲಾಗಿತ್ತು. ಆದರೆ ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ದೊರೆತಿದೆ.
ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡಲಾಗುತ್ತಿದ್ದು ಇದರಲ್ಲಿ ಅಯ್ಯಪ್ಪನ ಪಾತ್ರವನ್ನು ಪವನ್ ಕಲ್ಯಾಣ್ ಮಾಡುತ್ತಿದ್ದು ಕೋಶಿ ಪಾತ್ರಕ್ಕೆ ಸುದೀಪ್ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಈಗ ಸುದೀಪ್ ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂಬ ವಿಚಾರ ಹೊರಬಿದ್ದಿದೆ. ತೆಲುಗು ರೀಮೇಕ್‍ನಲ್ಲಿ ಆ ಪಾತ್ರವನ್ನೇ ತೆಗೆಯಲಾಗಿದೆಯಂತೆ. ಅಯ್ಯಪ್ಪನುಂ ಕೋಶಿಯುಂ ತೆಲುಗು ರೀಮೇಕ್‍ನಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದ್ದು, ಇಲ್ಲಿ ಮತ್ತೊಬ್ಬ ಹೀರೋ ಇರುವುದಿಲ್ಲವಂತೆ. ಕೇವಲ ಪವನ್ ಕಲ್ಯಾಣ್ ಮಾತ್ರ ಪ್ರಮುಖ ಪಾತ್ರ ಮಾಡಲಿದ್ದು, ಇನ್ನೊಂದು ಪಾತ್ರವನ್ನು ಸಂಪೂರ್ಣ ನೆಗೆಟಿವ್ ಪಾತ್ರವನ್ನಾಗಿ ಬದಲಾಯಿಸಲಾಗಿದೆಯಂತೆ. ಇನ್ನು ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಕೂಡಾ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಒಟ್ಟಾರೆ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಚಿತ್ರ ಇಷ್ಟವಾಗುವಂತೆ ಚಿತ್ರಕಥೆಯನ್ನು ಬದಲಾಯಿಸಲಾಗಿದೆ ಎಂದು ಹೇಳಲಾಗುತ್ತಿದೆ.
ತೆಲುಗು ರೀಮೇಕ್‍ಗೆ ಇನ್ನೂ ಹೆಸರು ಫೈನಲ್ ಮಾಡಿಲ್ಲ. ನಾಗವಂಶಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು ಸಾಗರ್ ಚಂದ್ರ ನಿರ್ದೇಶಿಸುತ್ತಿದ್ದಾರೆ. ಪವನ್ ಕಲ್ಯಾಣ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ತ್ರಿವಿಕ್ರಮ ಶ್ರೀನಿವಾಸ್, ಈ ಚಿತ್ರಕ್ಕೆ ಸಂಭಾಷಣೆಗಳನ್ನು ಬರೆಯುತ್ತಿದ್ದಾರಂತೆ. ಖ್ಯಾತ ನಟಿ ಸಾಯಿಪಲ್ಲವಿ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯಕ್ಕೆ ಪವನ್ ಕಲ್ಯಾಣ್, 'ವಕೀಲ್ ಸಾಬ್' ಚಿತ್ರದಲ್ಲಿ ನಟಿಸುತ್ತಿದ್ದು ಈ ಸಿನಿಮಾ ನಂತರ ಹೊಸ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.