ಕ್ರೀಡೆಗೂ ಪ್ರೋತ್ಸಾಹ ನೀಡುವಂತೆ ಕಿರುತೆರೆ ನಟ ಕಿರಣ್ ರಾಜ್ ಸಿಎಂಗೆ ಪತ್ರ ಬರೆದಿದ್ದು, ಅದರ ಮನವಿ ಪ್ರತಿಯನ್ನ ತಮ್ಮಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಹೆಸರು ಕಿರಣ್ ರಾಜ್. ಕನ್ನಡ, ಹಿಂದಿ ಕಿರುತೆರೆ ಮತ್ತು ಸಿನಿಮಾ ನಟ. ನಾನು ನ್ಯಾಷನಲ್ ಶೂಟಿಂಗ್ ಚಾಂಪಿಯನ್ ಆಗಿದ್ದು, ನನ್ನ ತಂದೆ ಮಾಜಿ ಆರ್ಮಿ ಆಫೀಸರ್. ನಾನು ನಟನಾಗುವ ಮೊದಲು ರಾಷ್ಟ್ರ ಮಟ್ಟದ ಶೂಟಿಂಗ್ ಪಟುವಾಗಿದ್ದೆ. ಅದರಿಂದ ನನ್ನ ಏಕಾಗ್ರತೆ ಹೆಚ್ಚಲು ಬಹಳ ಸಹಾಯವಾಗಿದೆ. ಅದಷ್ಟೇ ಅಲ್ಲದೇ, ಇನ್ನು ಅನೇಕ ರೀತಿಯಿಂದ ನನ್ನ ವೃತ್ತಿಜೀವನಕ್ಕೂ ಸಹಾಯವಾಗಿದೆ.
ಕೋವಿಡ್-9 ಲಾಕ್ಡೌನ್ನ ಕಾರಣದಿಂದಾಗಿ ತರಬೇತಿ ಶಾಲೆಗಳು ಮುಚ್ಚಿದ್ದವು. ಇದೀಗ ಲಾಕ್ಡೌನ್ ಸಡಿಲವಾಗಿದ್ದು, ವಿವಿಧ ಕ್ಷೇತ್ರಗಳು ತಮ್ಮ ಕೆಲಸಗಳನ್ನು ಪುನಾರಂಭಿಸಲು ಅನುಮತಿ ಸಿಕ್ಕಿದೆ. ಇದೀಗ ಕ್ರೀಡಾ ತರಬೇತಿ ಕೇಂದ್ರಗಳು ತೆರೆಯಲು ಅನುಮತಿ ಸಿಕ್ಕಿದ ಕಾರಣ ಕಲಿಯುವವರಿಗೆ ಬಹಳಷ್ಟು ಅನುಕೂಲ ಹಾಗೂ ತರಬೇತಿದಾರರ ಜೀವನೋಪಾಯಕ್ಕೆ ದಾರಿಯನ್ನ ಸರ್ಕಾರ ಕಲ್ಪಿಸಿಕೊಟ್ಟಿದೆ.
ಕ್ರಿಕೆಟ್ ಒಂದು ಜನಪ್ರಿಯ ಕ್ರೀಡೆಯಾಗಿದ್ದು, ಇತ್ತೀಚೆಗಿನ ಬೆಳವಣಿಗೆಯಲ್ಲಿ ಕ್ರಿಕಟ್ ಆಡುವುದಕ್ಕೆ ಕ್ರೀಡಾಂಗಣದಲ್ಲಿ ವೀಕ್ಷಕರಿಲ್ಲದೆ ನಡೆಸುವುದುಕ್ಕೆ ಅನುಮತಿ ಸಿಕ್ಕಿರುವುದಕ್ಕೆ ಕಾರಣ ಅದಕ್ಕಿರುವ ಪ್ರಾಮುಖ್ಯತೆ. ಇಂತಹ ಪ್ರಾಮುಖ್ಯತೆ ಒಲಿಂಪಿಕ್ಸ್ನಲ್ಲಿ ನಡೆಯುವ ಶೂಟಿಂಗ್, ಆರ್ಚರಿಯಂತಹ ಕ್ರೀಡೆಗಳಿಗೆ ದೊರೆತರೆ ರಾಜ್ಯದಲ್ಲಿ ಕ್ರೀಡೆಗಿರುವ ಮೌಲ್ಯ ಹೆಚ್ಚುತ್ತದೆ.
ನಮ್ಮ ರಾಜ್ಯದಲ್ಲಿ ಒಲಿಂಪಿಕ್ಸ್ನಲ್ಲಿ ಭಾಗವಹಿಸುವಷ್ಟು ಸಾಮರ್ಥ್ಯವುಳ್ಳ ಶೂಟಿಂಗ್ ಪಟುಗಳು ಇರುವುದು ಖಚಿತ. ಇಂತಹ ಅದ್ಭುತ ಪ್ರತಿಭೆಗಳ ತರಬೇತಿ ಹಾಗೂ ಮತ್ತಷ್ಟು ಪ್ರತಿಭೆಗಳಿಗೆ ಸ್ಫೂರ್ತಿಯನ್ನು ಹುರಿದುಂಬಿಸಲು ಬೇಕಾದ ಪ್ರಾಮುಖ್ಯತೆ ಒದಗಿಸಬೇಕಾಗಿದೆ. ಕರ್ನಾಟಕದ ಎಲ್ಲಾ ಶೂಟಿಂಗ್ ತರಬೇತಿ ಕೇಂದ್ರಗಳಿಗೆ ಮತ್ತು ಇತರೆ ಕ್ರೀಡೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲು ಅವಕಾಶ ಮಾಡಿಕೊಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಕರ್ನಾಟಕದ ಎಲ್ಲಾ ಸ್ಫೋರ್ಟ್ಸ್ ತರಬೇತಿ ಕೇಂದ್ರಗಳ ಪರವಾಗಿ ಮನವಿ ಮಾಡುತ್ತೇನೆ ಎಂದು ಕಿರಣ್ ರಾಜ್ ಪತ್ರದ ಮೂಲಕ ತಿಳಿಸಿದ್ದಾರೆ.