ಕನ್ನಡ ಕಿರುತೆರೆಯಲ್ಲಿ ಡಬ್ಬಿಂಗ್ ಧಾರಾವಾಹಿಗಳು ರಾರಾಜಿಸುತ್ತಿದೆ. ಅವುಗಳ ಜೊತೆಗೆ ಡಬ್ಬಿಂಗ್ ಸಿನಿಮಾಗಳು ಕೂಡಾ ಕನ್ನಡ ಕಿರುತೆರೆಯಲ್ಲಿ ಮೇಲಿಂದ ಮೇಲೆ ಪ್ರಸಾರ ಕಾಣುತ್ತಿದೆ. ಈಗಾಗಲೇ ಜಗಮಲ್ಲ, ಬಿಗಿಲ್, ಕಮಾಂಡೋ, ಕಾಂಚನಾ 3, ಸೆಲ್ಫಿ ಶುರು ಮಾಡಿದ ಲವ್ ಸ್ಟೋರಿ ಸಿನಿಮಾಗಳು ಪರಭಾಷೆಯಿಂದ ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗಿವೆ. ಇವು ಉತ್ತಮ ಟಿಆರ್ಪಿ ಗಳಿಸಿದ್ದವು. ಬಹುಶಃ ಅದೇ ಕಾರಣದಿಂದ ವಾಹಿನಿಗಳು ಕೂಡಾ ಡಬ್ಬಿಂಗ್ ಸಿನಿಮಾಗಳಿಗೆ ಆದ್ಯತೆ ನೀಡುತ್ತಿವೆ ಎಂದರೆ ತಪ್ಪಲ್ಲ.
ಡಬ್ಬಿಂಗ್ ಸಿನಿಮಾಗಳ ಪ್ರಸಾರದ ಕುರಿತು ಒಂದಷ್ಟು ಜನ ವಿರೋಧಿಸಿದ್ದರು. ಜೊತೆಗೆ ಕೆಲವು ಮಂದಿ ಪರವಾಗಿಯೂ ಮಾತನಾಡಿದ್ದರು. ಇವುಗಳೆಲ್ಲದ ಮಧ್ಯೆ ಈ ವಾರ ಮಗದೊಂದು ಡಬ್ಬಿಂಗ್ ಸಿನಿಮಾ ಕನ್ನಡ ಕಿರುತೆರೆಯಲ್ಲಿ ಪ್ರಸಾರಗೊಳ್ಳಲಿದೆ. ತೆಲುಗಿನ ಹ್ಯಾಂಡ್ ಸಮ್ ಹುಡುಗ ವಿಜಯ್ ದೇವರಕೊಂಡ ಅಭಿನಯದ ಟ್ಯಾಕ್ಸಿವಾಲ ಸಿನಿಮಾ ಕನ್ನಡ ಭಾಷೆಗೆ ಡಬ್ ಆಗುವುದಲ್ಲದೇ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಭಾನುವಾರ ಸಂಜೆ ಆರು ಗಂಟೆಗೆ ಪ್ರಸಾರ ಕಾಣಲಿದೆ.
2018ರಲ್ಲಿ ಬಿಡುಗಡೆಯಾದ ರಾಹುಲ್ ಸಂಕೃತ್ಯಾನ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ , ಪ್ರಿಯಾಂಕಾ ಜಾವಲ್ಕರ್ , ಮಾಳವಿಕಾ ನಾಯರ್ ,ಮಧುನಂದನ್, ರವಿವರ್ಮಾ ಸೇರಿದಂತೆ ಹಲವರು ನಟಿಸಿದ್ದಾರೆ.