ಚೆನ್ನೈ (ತಮಿಳುನಾಡು): ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಚಲನಚಿತ್ರ ವ್ಯವಹಾರಕ್ಕೆ ಅಡ್ಡಿ ಉಂಟಾಗಿದ್ದು, ಚೆನ್ನೈ ಮೂಲದ ಚಲನಚಿತ್ರ ನಿರ್ದೇಶಕ ಆನಂದ್ ಅವರು ತಮ್ಮ ಜೀವನದ ಅವಶ್ಯತೆಗಳನ್ನು ಪೂರೈಸಲು ದಿನಸಿ ಅಂಗಡಿಯೊಂದನ್ನು ತೆರೆದಿದ್ದಾರೆ.
10 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿರುವ ಅವರು, ದೇಶದ ಚಿತ್ರಮಂದಿರಗಳು ಮುಚ್ಚಿರುವ ಹಿನ್ನೆಲೆ ಚಲನಚಿತ್ರ ನಿರ್ಮಾಣವೂ ಕಷ್ಟಕರವಾಗಿರುವ ಈ ಸಮಯದಲ್ಲಿ ಅಂಗಡಿ ತೆರೆಯುವ ನಿರ್ಧಾರ ಮಾಡಿದ್ದರು.
ಉಳಿತಾಯದ ಹಣವನ್ನು ಬಳಸಿಕೊಂಡ ಅವರು, ತಮ್ಮ ಆಪ್ತ ಸ್ನೇಹಿತನಿಂದ ಕಟ್ಟಡ ಬಾಡಿಗೆಗೆ ಪಡೆದು ಚೆನ್ನೈನ ಮೌಲಿವಕ್ಕಂನಲ್ಲಿ ದಿನಸಿ ಅಂಗಡಿ ಪ್ರಾರಂಭಿಸಿದ್ದಾರೆ.
"ನಾನು ತೈಲ, ಬೇಳೆಕಾಳುಗಳು, ಅಕ್ಕಿ ಸೇರಿದಂತೆ ಎಲ್ಲ ಉತ್ಪನ್ನಗಳನ್ನು ಬಹಳ ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇನೆ. ನನಗೆ ಸಂತೋಷವಾಗಿದೆ" ಎಂದು ನಿರ್ದೇಶಕ ಆನಂದ್ ಹೇಳಿದರು.
"ಈ ವರ್ಷ ಚಲನಚಿತ್ರೋದ್ಯಮವನ್ನು ಅನ್ಲಾಕ್ ಮಾಡಲಾಗುತ್ತದೆ ಎಂದು ನನಗೆ ಅನಿಸುತ್ತಿಲ್ಲ. ಮಾಲ್‌ಗಳು, ಉದ್ಯಾನವನಗಳು ತೆರೆದ ನಂತರವೇ ಚಿತ್ರಮಂದಿರಗಳು ತೆರೆಯಲ್ಪಡುತ್ತವೆ. ಅದರ ನಂತರವೇ ನಮಗೆ ವೃತ್ತಿಜೀವನವಿದೆ. ಅಲ್ಲಿಯವರೆಗೆ ನಾನು ನನ್ನ ದಿನಸಿ ಅಂಗಡಿಯಲ್ಲಿ ಇರುತ್ತೇನೆ" ಎಂದು ಅವರು ಹೇಳಿದರು.
ಒರು ಮಲೈ ನಾಂಗು ಸರಲ್, ಮೌನಾ ಮಲೈ ಮತ್ತು ಇತರ ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. ಅವರ ಕೊನೆಯ ಚಿತ್ರ ತುನಿಂತು ಸೀ ನಿರ್ಮಾಣ ಪೂರ್ಣಗೊಂಡಿದ್ದು, ಕೇವಲ ಎರಡು ಹಾಡುಗಳ ಶೂಟಿಂಗ್ ಬಾಕಿ ಉಳಿದಿವೆ.