ಲಾಕ್ಡೌನ್ನಿಂದಾಗಿ ದಿನಗೂಲಿ ನೌಕರರು ಕೆಲಸ ಇಲ್ಲದೆ, ಹಣ ಸಿಗದೆ ಒಂದು ದಿನದ ಊಟಕ್ಕೆ ಕಷ್ಟ ಪಡುವ ಪರಿಸ್ಥಿತಿ ಉಂಟಾಗಿದೆ. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಕೂಡಾ ಹಿರಿಯ ಪೋಷಕ ಕಲಾವಿದರು, ದಿನಗೂಲಿ ಕಾರ್ಮಿಕರು ಕೂಡಾ ಚಿತ್ರೀಕರಣ ಬಂದ್ ಆಗಿರುವುದರಿಂದ ಊಟಕ್ಕಾಗಿ ಪರದಾಡುತ್ತಿದ್ದಾರೆ.
ಈ ಪರಿಸ್ಥಿತಿಯನ್ನು ನಿಭಾಯಿಸಲು ಕೆಲ ನಟರ ಅಭಿಮಾನಿಗಳು ಹಾಗೂ ಕೆಲವು ಪೋಷಕ ನಟರು ಕಷ್ಟದಲ್ಲಿರುವ ಕಲಾವಿದರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಇದೀಗ ಕಿಚ್ಚ ಸುದೀಪ್ ಚಾರಿಟೆಬಲ್ ಸೊಸೈಟಿ ಕೂಡಾ ಚಿತ್ರರಂಗದ ತಂತ್ರಜ್ಞರಿಗೆ, ದಿನ ಗೂಲಿ ಕಾರ್ಮಿಕರಿಗೆ ದವಸ, ಧ್ಯಾನಗಳನ್ನು ವಿತರಿಸುವ ಕೆಲಸ ಮಾಡುತ್ತಿದೆ. ಕಳೆದ 10 ದಿನಗಳಿಂದ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಹಸಿದವರ ಹೊಟ್ಟೆ ತುಂಬಿಸುತ್ತಿದೆ. ಹಿರಿಯ ಪೋಷಕ ಕಲಾವಿದ ಡಿಂಗ್ರಿ ನಾಗರಾಜ್ ನೇತೃತ್ವದಲ್ಲಿ ಸಾಕಷ್ಟು ಜನ ಪೋಷಕ ಕಲಾವಿದರಿಗೆ ನಿನ್ನೆ ಧ್ಯಾನವನ್ನು ವಿತರಣೆ ಮಾಡಲಾಯ್ತು. ನಂತರ ಮಾತನಾಡಿದ ಹಿರಿಯ ಪೋಷಕ ನಟ ಡಿಂಗ್ರಿ ನಾಗರಾಜ್, ಸುದೀಪ್ ಟ್ರಸ್ಟ್ ವತಿಯಿಂದ ಮಾಡುತ್ತಿರುವ ಒಳ್ಳೆ ಕೆಲಸ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಧನ್ಯವಾದ ಅರ್ಪಿಸಿದರು.