ಕನ್ನಡ ಚಿತ್ರರಂಗದಲ್ಲಿ ಅಭಿನಯ ಚಕ್ರವರ್ತಿ ಅಂತಾ ಕರೆಯಿಸಿಕೊಂಡಿರುವ ಕಿಚ್ಚ ಸುದೀಪ್ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕೊರೊನಾದಿಂದಾಗಿ ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳದ ಸುದೀಪ್, ಕೆಲವು ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡಿದ್ದಾರೆ.
ಸುದೀಪ್ ಲೈವ್ ವಿಡಿಯೋ ಮೂಲಕ ವೃದ್ಧರು ಹಾಗೂ ಅನಾಥ ಮಕ್ಕಳ ಜೊತೆ ಮಾತನಾಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನ ಆಚರಿಸಿದ್ದಾರೆ. ಯಲಹಂಕ ಹತ್ತಿರ ದೊಡ್ಡ ಗುಬ್ಬಿಯಲ್ಲಿರೋ ಆಟೋರಾಜ ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಹಾಗೂ ಅನಾಥ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಹಾಗೆಯೇ ಅನಾಥ ಮಕ್ಕಳ ಕೈಯಲ್ಲಿ ಕೇಕ್ ಕಟ್ ಮಾಡಿಸುವ ಮೂಲಕ ಅಲ್ಲಿರುವ ಮುಗ್ಧ ಜೀವಗಳ ಜೊತೆ ಸುದೀಪ್ ಮಾತನಾಡಿದ್ದಾರೆ.
ಇದ್ರ ಜೊತೆಗೆ ಕಿಚ್ಚ ಸುದೀಪ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ, ಮಾಗಡಿ ರಸ್ತೆಯಲ್ಲಿರುವ ಎಲೆಕೋಡಿಗೆ ಹಳ್ಳಿಯಲ್ಲಿ ಶಾಂತಿ ನಿವಾಸ ಎಂಬ ವೃದ್ಧಾಶ್ರಮವನ್ನು ಕಟ್ಟುಲು ಸುದೀಪ್ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸುದೀಪ್ ಪತ್ನಿ ಪ್ರಿಯಾ ಸುದೀಪ್ ಗುದ್ದಲಿ ಪೂಜೆ ಮಾಡಿ, ಆಶ್ರಮ ಕಟ್ಟೋದಿಕ್ಕೆ ಚಾಲನೆ ನೀಡಿದ್ದಾರೆ. ಮಕ್ಕಳಿಂದ ಅನ್ಯಾಯಕ್ಕೆ ಒಳಗಾಗಿ ರಸ್ತೆ ಬದಿ ವಾಸ ಮಾಡುವ ವಯಸ್ಸಾದ ವೃದ್ಧರನ್ನು ಕರೆದುಕೊಂಡು ಬಂದು ಆರೈಕೆ ಮಾಡುವ ಉದ್ದೇಶದಿಂದ ಈ ಶಾಂತಿನಿವಾಸ ಆಶ್ರಮವನ್ನು ನಿರ್ಮಾಣ ಮಾಡಲಾಗುತ್ತಿದೆ.
ಒಟ್ಟಾರೆ ಸುದೀಪ್ ತಮ್ಮ ಹುಟ್ಟು ಹಬ್ಬದ ದಿನ ಸಮಾಜಮುಖಿ ಕೆಲಸಗಳನ್ನು ಮಾಡಿ ಜನಮನ್ನಣೆ ಹಾಗೂ ಅಭಿಮಾನಿಗಳ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ.