ಸೆಪ್ಟೆಂಬರ್ 2 ಸುದೀಪ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಏಕೆಂದರೆ ಅದು ಸುದೀಪ್ ಹುಟ್ಟಿದ ದಿನ. ಈ ಬಾರಿ ಸುದೀಪ್ ತಮ್ಮ 47ನೇ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಳ್ಳುತ್ತಿಲ್ಲ. ಆದರೆ ಆ ದಿನ ಸುದೀಪ್ ಕುರಿತಾದ ಪುಸ್ತಕವೊಂದು ಬಿಡುಗಡೆಯಾಗುತ್ತಿದೆ.
ಸುದೀಪ್ ಸದ್ಯಕ್ಕೆ ಹೈದರಾಬಾದ್ ಅನ್ನಪೂರ್ಣ ಸ್ಟುಡಿಯೋದಲ್ಲಿ 'ಫ್ಯಾಂಟಮ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಸೆಪ್ಟೆಂಬರ್ 2 ರ ಬುಧವಾರ ಡಾ. ಶರಣ್ ಹುಲ್ಲೂರು ಬರೆದಿರುವ ಸುದೀಪ್ ಬಯೋಗ್ರಫಿ ಬಿಡುಗಡೆಯಾಗುತ್ತಿದೆ. ಇದು ಅಭಿನಯ ಚಕ್ರವರ್ತಿಗೆ ಅಭಿಮಾನದ ಉಡುಗೊರೆ ಎನ್ನುತ್ತಾರೆ ಡಾ. ಶರಣ್. ಆದರೆ ಈ ಪುಸ್ತಕವನ್ನು ಯಾರು ಬಿಡುಗಡೆ ಮಾಡುತ್ತಿದ್ದಾರೆ ಎಂದು ಶರಣ್ ಹುಲ್ಲೂರು ಇನ್ನೂ ಗೌಪ್ಯವಾಗಿಟ್ಟಿದ್ದಾರೆ.
ಸುದೀಪ್ ಹುಟ್ಟುಹಬ್ಬದಂದು ಬಿಡುಗಡೆಯಾಗುತ್ತಿರುವ ಬಯೋಗ್ರಫಿಯನ್ನು ಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪುಸ್ತಕ ಬಿಡುಗಡೆ ಜೊತೆಗೆ ಸುದೀಪ್ ಚಾರಿಟೆಬಲ್ ಸೊಸೈಟಿ ವತಿಯಿಂದ 'ಮೊದಲು ಮಾನವನಾಗು' ಎಂಬ ಅಭಿಯಾನದಡಿ ರಾಜ್ಯದ ಸುಮಾರು 20 ಜಿಲ್ಲೆಗಳಲ್ಲಿ ಮಾಸ್ಕ್ ವಿತರಣೆ, ಹಾಗೂ ಎಲ್ಲಾ ಜಿಲ್ಲೆಗಳ ಅನಾಥಾಶ್ರಮಕ್ಕೆ ಸಹಾಯ ಮಾಡುವುದರ ಜೊತೆಗೆ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎನ್ನಲಾಗಿದೆ.