ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಏಪ್ರಿಲ್ 1ರಂದು ಬಿಡುಗಡೆಗೆ ಸಜ್ಜಾಗಿದೆ. ಈ ಮಧ್ಯೆ ಸಿನಿಮಾದ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ.
ಬೆಂಗಳೂರಿನ ಊರ್ವಶಿ, ವೀರೇಶ್ ಸೇರಿದಂತೆ ಮುಂತಾದ ಚಿತ್ರಮಂದಿರಗಳಲ್ಲಿ ಇಂದು (ಭಾನುವಾರ) ಬೆಳಗ್ಗೆ 9 ಗಂಟೆಯಿಂದಲೇ ಬುಕ್ಕಿಂಗ್ ಪ್ರಾರಂಭವಾಗಿದೆ. ನಿರೀಕ್ಷಿತ ಚಿತ್ರಗಳಿಗೆ ಬಿಡುಗಡೆಯ ಕೆಲವು ದಿನಗಳ ಮುಂಚೆಯೇ ಅಡ್ವಾನ್ಸ್ ಬುಕ್ಕಿಂಗ್ ಪ್ರಾರಂಭವಾಗುವುದು ಹೊಸ ವಿಷಯವೇನಲ್ಲ. ಈ ಹಿಂದೆ ರಾಬರ್ಟ್ ಮತ್ತು ಪೊಗರು ಚಿತ್ರಗಳ ಬಿಡುಗಡೆಗೂ ಕೆಲವು ದಿನಗಳ ಮುಂಚೆಯೇ ಅಡ್ವಾನ್ಸ್ ಬುಕ್ಕಿಂಗ್ ಪ್ರಾರಂಭಿಸಲಾಗಿತ್ತು. ಇದೀಗ ಯುವರತ್ನ ಚಿತ್ರದ ಬುಕ್ಕಿಂಗ್ ಶುರುವಾಗಿದ್ದು, ಮೊದಲ ದಿನವೇ ಟಿಕೆಟ್ ಪಡೆಯುವುದಕ್ಕೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇಂದು ಮುಂಜಾನೆಯಿಂದಲೇ ಕಾದು-ಕಾದು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ರಾಬರ್ಟ್ ಮತ್ತು ಪೊಗರು ಚಿತ್ರಗಳ ಮೊದಲ ಪ್ರದರ್ಶನ ಬೆಳಗ್ಗೆ 6 ಗಂಟೆಯಿಂದಲೇ ಪ್ರಾರಂಭವಾಗಿತ್ತು. ಆದರೆ, ಯುವರತ್ನ ಚಿತ್ರದ ಮೊದಲ ಪ್ರದರ್ಶನ ಬೆಳಗ್ಗೆ ಆರಕ್ಕೇ ಶುರುವಾಗುತ್ತದೋ ಅಥವಾ ಎಲ್ಲ ಚಿತ್ರಗಳಂತೆ ಬೆಳಗ್ಗೆ 10ಕ್ಕೆ ಶುರುವಾಗುತ್ತದೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
'ಯುವರತ್ನ' ಚಿತ್ರವು ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ಹೊರದೇಶಗಳಲ್ಲೂ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಸಂತೋಷ್ ಆನಂದರಾಮ್ ಬರೆದು ನಿರ್ದೇಶನ ಮಾಡಿದರೆ, ಹೊಂಬಾಳೆ ಫಿಲಂಸ್‍ನಡಿ ವಿಜಯ್ ಕುಮಾರ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಪುನೀತ್ ಜೊತೆಗೆ ಸಾಯೇಷಾ ಸೆಹಗಲ್, ಧನಂಜಯ್, ಪ್ರಕಾಶ್ ರೈ, ಅವಿನಾಶ್, ರಂಗಾಯಣ ರಘು, ರವಿಶಂಕರ್ ಗೌಡ, ಸಾಧು ಕೋಕಿಲ, ಸುಧಾರಾಣಿ ಸೇರಿದಂತೆ ಹಲವರು ನಟಿಸಿದ್ದಾರೆ.
ಓದಿ: 'ರಾಬರ್ಟ್' ವಿಜಯ ಯಾತ್ರೆ ರದ್ದು.. ಡಿ ಬಾಸ್ ಕೊಟ್ಟ ಕಾರಣವೇನು ಗೊತ್ತಾ.?