ಮೊನ್ನೆ ನಡೆದ 'ಯಜಮಾನ' ಶತದಿನೋತ್ಸವ ಕಾರ್ಯಕ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್ ಸಿನಿಮಾ 'ನಿಂತ ನೋಡು ಯಜಮಾನ' ಹಾಡು ಹೇಳಿ ಎಲ್ಲರನ್ನೂ ರಂಜಿಸಿದರು. ಇನ್ನು ವಿಜಯ್ ಪ್ರಕಾಶ್ ಹಾಡುವುದಕ್ಕೂ ಸೈ ಅಭಿನಯಕ್ಕೂ ಜೈ ಎನ್ನುತ್ತಾರೆ. ಸಂಗೀತಮಯ ಚಿತ್ರದಲ್ಲಿ ನೀವು ಅಭಿನಯಿಸಲು ಸಿದ್ಧರಿದ್ದೀರಾ ಅಂತ ವಿಜಯ ಪ್ರಕಾಶ್ ಅವರನ್ನು ಕೇಳಿ ನೋಡಿ, ಅವರ ಮುಖ ಅರಳುತ್ತದೆ. ನಾನು 'ಮಲಯ ಮಾರುತ' ಸಿನಿಮಾವನ್ನು ಐದು ಬಾರಿ ನೋಡಿದವನು. ಯಾರಾದರೂ ಮುಂದೆ ಬಂದು ಅಂತಹ ಆಹ್ವಾನ ಕೊಟ್ಟರೆ ನಾನು ಕ್ಯಾಮರಾ ಮುಂದೆ ಬರಲು ಸಿದ್ಧ ಎಂದು ಹೇಳಿದ್ದಾರೆ.
ವಿಜಯ್ ಪ್ರಕಾಶ್ ತಮ್ಮ ವೃತ್ತಿ ಜೀವನದಲ್ಲಿ ಮೈಸೂರಿನಿಂದ ಮುಂಬೈಗೆ ಹೋಗಿ ಅನೇಕ ಕಷ್ಟದ ದಿವಸಗಳನ್ನು ಕಂಡಿದ್ದಾರೆ. ತಾನು ಪಟ್ಟ ಕಷ್ಟ ಬೇರೆ ಪ್ರತಿಭೆಗಳಿಗೆ ಬರಬಾರದು ಎಂದು ನಿರ್ಧರಿಸಿ ವಿಜಯ್ ಪ್ರಕಾಶ್ ಬೆಂಗಳೂರಿನಲ್ಲಿ ಒಂದು ಅತ್ಯುತ್ತಮ ಸಂಗೀತ ಶಾಲೆಯನ್ನು ಪ್ರಾರಂಭಿಸಿ ಅನೇಕ ಪ್ರತಿಭೆಗಳನ್ನು ಬೆಳೆಸಬೇಕೆಂದು ಯೋಚಿಸಿದ್ದಾರೆ. ಈಗಾಗಲೇ ಪ್ಲಾನ್ ಕೂಡಾ ರೆಡಿಯಾಗಿದ್ದು, ಅದು ಸರಿಯಾದ ಸಮಯಕ್ಕೆ ಪ್ರಾರಂಭ ಆಗುತ್ತದೆ. ಕರ್ನಾಟಕದಲ್ಲಿರುವ ಪ್ರತಿಭೆಗಳು ಅವಕಾಶಕ್ಕಾಗಿ ಕಷ್ಟ ಪಡದೆ ಸಲೀಸಾಗಿ ಮುನ್ನುಗ್ಗಬೇಕು. ಅದಕ್ಕೆ ಒಂದು ಶಾಲೆ ಬಗ್ಗೆ ನಾನು ನಕ್ಷೆ ಸಿದ್ಧಪಡಿಸುತ್ತಿದ್ದೇನೆ ಎನ್ನುತ್ತಾರೆ ವಿಜಯ್ ಪ್ರಕಾಶ್.
ಅಮೆರಿಕದ ನಾರ್ತ್ ಕರೋಲಿನಾ, ಕಾಂಕಾರ್ಡ್ ಸಿಟಿಯಲ್ಲಿ 2019 ಮೇ 12 ವಿಜಯ್ ಪ್ರಕಾಶ್ ಕಾರ್ಯಕ್ರಮವೊಂದನ್ನು ನೀಡಿದ್ದರು. ವಿಜಯ್ ಪ್ರಕಾಶ್ ಹಾಡಿದ ಶಂಕರ್ನಾಗ್ ಸಿನಿಮಾದ ಹಾಡಿಗೆ ಅಲ್ಲಿನ ಕನ್ನಡಿಗರು ಪ್ರತಿಕ್ರಿಯಿಸಿದ ರೀತಿಯನ್ನು ನೋಡಿ ಕಾಂಕಾರ್ಡ್ ಸಿಟಿ ಮೇಯರ್, ಆ ದಿನವನ್ನು 'ವಿಜಯ್ ಪ್ರಕಾಶ್ ದಿವಸ' ಎಂದು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ ವಿಜಯ್ ಪ್ರಕಾಶ್, ಇಂತಹ ಘೋಷಣೆ ನಾನು ಅಪೇಕ್ಷಿಸಿರಲಿಲ್ಲ. ವಿದೇಶದಲ್ಲಿ ಕನ್ನಡಿಗರು ಸಿನಿಮಾ ಸಂಗೀತ ಅಷ್ಟೇ ಅಲ್ಲದೆ ಶಾಸ್ತ್ರೀಯ ಸಂಗೀತವನ್ನೂ ಹೆಚ್ಚಾಗಿ ಪ್ರೀತಿಸುತ್ತಾರೆ. ಅನೇಕರಿಗೆ ಅಲ್ಲಿಯೇ ಸಂಗೀತದ ತಾಲೀಮು ಕೂಡಾ ಮಾಡುತ್ತಿದ್ದೇನೆ. ಆದರೆ ಬೆಂಗಳೂರಿನಲ್ಲಿ ಸುಸಜ್ಜಿತವಾದ ಸಂಗೀತ ಶಾಲೆ ಸ್ಥಾಪಿಸುವುದು ನನ್ನ ಗುರಿ ಎನ್ನುತ್ತಾರೆ ವಿಜಯ್ ಪ್ರಕಾಶ್.
ಮಾತಿನ ಮಧ್ಯೆ ತಂದೆ ವಿದ್ವಾನ್ ಎಲ್. ರಾಮಶೇಷು ಅವರನ್ನು ವಿಜಯ್ ಪ್ರಕಾಶ್ ನೆನಪಿಸಿಕೊಂಡರು. ನಾನು ವಿದೇಶದಲ್ಲಿ ಇದ್ದಾಗ ಅಪ್ಪ ಕಾಲವಾದರು. ಅಲ್ಲಿಂದ ಬಂದು ಅವರ ಅಂತ್ಯಕ್ರಿಯೆ ಮಾಡಿದೆ. ಅಪ್ಪ ಹಾಗೂ ತಾತ ನನಗೆ ಗುರುಗಳು. ನನ್ನ ತಂದೆಯಂತೂ ಯಾವ ಸಿನಿಮಾ ಹಾಡನ್ನೂ ಇಷ್ಟಪಡುತ್ತಿರಲಿಲ್ಲ. ಅವರಿಗೆ ನಾನು ಶಾಸ್ತ್ರೀಯ ಸಂಗೀತ ಹೇಳಿದರೆ ಮಾತ್ರ ಇಷ್ಟವಾಗುತ್ತಿತ್ತು ಎಂದು ತಮ್ಮ ಹಾಗೂ ತಂದೆ ನಡುವಿನ ಬಾಂಧವ್ಯವನ್ನು ನೆನಪಿಸಿಕೊಂಡರು.