ಇಡೀ ವಿಶ್ವವನ್ನ ಮಹಾಮಾರಿಯಾಗಿ ಕಾಡುತ್ತಿರುವ ಕೊರೊನಾ ವೈರಸ್ ವಿರುದ್ಧ ಹೋರಾಡಲು ಈಗಾಗಲೇ ಉದ್ಯಮಿಗಳು, ಸಿನಿಮಾ ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ನಟ ಪುನೀತ್ ರಾಜ್‍ಕುಮಾರ್ ಮುಖ್ಯಮಂತ್ರಿ ಕೊರೊನಾ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ಕೊಟ್ಟಿದ್ದರು. ಈಗ ಜೈ ಹೋ ಹಾಡಿನ ಖ್ಯಾತಿಯ ಹಾಗು ನಮ್ಮ ಕನ್ನಡದ ಹೆಮ್ಮೆಯ ಗಾಯಕ ವಿಜಯ ಪ್ರಕಾಶ್ ಕೂಡ ಮುಖ್ಯಮಂತ್ರಿ ಕೊರೊನಾ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಅಷ್ಟೇ ಅಲ್ಲ ಪ್ರಧಾನ ಮಂತ್ರಿ ಪರಿಹಾರ ನಿಧಿ ಹಾಗು ಮಹಾರಾಷ್ಟ್ರ ಸರ್ಕಾರದ ಪರಿಹಾರ ನಿಧಿಗೆ ಆನ್ ಲೈನ್ ಮೂಲಕ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದೇನೆ ಎಂದು ವಿಜಯ ಪ್ರಕಾಶ್ ತಿಳಿಸಿದ್ದಾರೆ.
ಇದರ ಜೊತೆಗೆ 'ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ ಅಂತ ಪುರಂದರ ದಾಸರ ಸಾಲುಗಳನ್ನು ಹೇಳಿರುವ ಅವರು, ನನ್ನ ಜೀವನದಲ್ಲಿ ಸಮಸ್ತ ಕನ್ನಡ ಜನತೆ ಆ ಪ್ರೀತಿಯ ಬೊಗಸೆಯನ್ನ ತುಂಬಿಸಿ ಕೊಟ್ಟಿದ್ದಾರೆ. ಆ ಬೊಗಸೆಯಿಂದ ಒಂದು ಚಿಕ್ಕ ಕಾಣಿಕೆ ಜನರಿಗಾಗಿ ಕೊಡುವುದು ನನ್ನ ಸೌಭಾಗ್ಯ, ನನ್ನ ಕರ್ತವ್ಯ, ಇದು ಭಗವಂತನ ಕೃಪೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಕೊರೊನಾಾ ಮಹಾಮಾರಿಯನ್ನ ನಾವೆಲ್ಲರೂ ಮನೆಯೊಳಗಿದ್ದು ಎದುರಿಸುತ್ತಿದ್ದರೆ, ಹೊರಗಡೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ನಮ್ಮ ಸರ್ಕಾರದ ಎಲ್ಲ ಅಧಿಕಾರಿಗಳು, ವೈದ್ಯರು ಹಾಗೂ ಅವರ ತಂಡ, ಪೊಲೀಸರು ಹೀಗೆ ಹಗಲು ರಾತ್ರಿ ನಮ್ಮನ್ನ ಈ ಒಂದು ಮಹಾಮಾರಿಯಿಂದ ರಕ್ಷಿಸಲು ಕೆಲಸ ಮಾಡುತ್ತಿದ್ದಾರೆ. ಇಂಥ ಒಂದು ಸಂದರ್ಭದಲ್ಲಿ ನಾವೆಲ್ಲರೂ ನಮ್ಮ ಕೈಯಲ್ಲಿ ಆದಷ್ಟು ಪರಿಹಾರ ನಿಧಿಗೆ ಕೊಟ್ಟರೆ ಅದು ಎಲ್ಲಿಯೋ ಯಾರೋ ಒಬ್ಬರ ಪ್ರಾಣವನ್ನ ಉಳಿಸಲು ಅನುಕೂಲವಾಗಬಹುದು ಎಂದು ಭಾವಿಸುತ್ತೇನೆ.
ಹಾಗಾಗಿ ಸಮಸ್ತ ಜನತೆಯಲ್ಲಿ ನನ್ನ ಪ್ರಾರ್ಥನೆ, ನಿಮ್ಮ ಕೈಯಲ್ಲಿ ಆದಷ್ಟು ಕೊಡುಗೆಯನ್ನ ಈ ಪರಿಹಾರ ನಿಧಿಗೆ ಮಾಡಿ. ನಿಮ್ಮಿಂದ ಯಾರೋ ಒಬ್ಬರ ಜೀವ ಉಳಿಯಲಿಕ್ಕೆ ಸಾಧ್ಯವಾಗುತ್ತೆ.ಇಂಥ ಸಮಯದಲ್ಲಿ ನಾವೆಲ್ಲರೂ ಕೈಜೋಡಿಸಿ ನಿಂತರೆ, ಖಂಡಿತವಾಗಿಯೂ ಈ ಕೊರೊನಾ ಅನ್ನುವ ಮಹಾಮಾರಿಯನ್ನ ಗೆದ್ದು ಮೊದಲಿನಂತೆಯೇ ಸಮಾಜದಲ್ಲಿ ಸುಖವಾಗಿ, ಸಂತೋಷವಾಗಿ ಬದುಕುತ್ತೇವೆ ಅನ್ನುವ ಭರವಸೆ ನನಗಿದೆ ಎಂದು ತಿಳಿಸಿದ್ದಾರೆ.