ಲಾಕ್ಡೌನ್ಗೂ ಮುನ್ನವೇ ಹೊಸಪೇಟೆಯಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ಆಗಿತ್ತು. ಚಿತ್ರೀಕರಣ ಇನ್ನೇನು ಶುರುವಾಗಬೇಕು ಎನ್ನುವಷ್ಟರಲ್ಲಿ ಲಾಕ್ಡೌನ್ ಘೋಷಣೆಯಾಯಿತು. ಇದೀಗ ರಾಜ್ಯಾದ್ಯಂತ ಅನ್ಲಾಕ್ ಆಗಿದ್ದು, ಚಿತ್ರೀಕರಣ ಚಟುವಟಿಕೆಗಳು ಪ್ರಾರಂಭವಾಗಿವೆ.
ರಾಣಾ ಚಿತ್ರದ ಚಿತ್ರೀಕರಣ ಸಹ ಮುಂದಿನ ವಾರದಿಂದ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಟೈಟಲ್ ಘೋಷಿಸಲಾಗಿದೆ. ಇನ್ನು, ಜುಲೈ 07ರಂದು ಚಿತ್ರದ ಮುಹೂರ್ತ, ಗವೀಪುರಂನ ಬಂಡೆ ಮಾಕಳಮ್ಮ ದೇವಸ್ಥಾನದಲ್ಲಿ ನಡೆಯಲಿದೆ. ಈ ಮುಹೂರ್ತ ಸಮಾರಂಭದಲ್ಲಿ ಯಾರೆಲ್ಲ ಭಾಗವಹಿಸುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಈ ಸಿನಿಮಾಗೋಸ್ಕರ ನಿರ್ದೇಶಕ ನಂದ ಕಿಶೋರ್ ,ಧ್ರುವ ಸರ್ಜಾ ನಟಿಸಬೇಕಿರುವ ದುಬಾರಿ ಚಿತ್ರದಿಂದ ಹೊರಬಂದು, ರಾಣ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೊಂದು ಪಕ್ಕಾ ಮಾಸ್ ಕಮರ್ಷಿಯಲ್ ಚಿತ್ರವಾಗಿದ್ದು, ಶ್ರೇಯಸ್ ಫಸ್ಟ್ ಟೈಂ ಮಾಸ್ ಹೀರೋ ಆಗಿ ಮಿಂಚಲು ತಯಾರಿ ನಡೆಸಿದ್ದಾರೆ.
ಶ್ರೇಯಸ್ ಗೆ ನಾಯಕಿಯಾಗಿ, ’ಏಕ್ ಲವ್ ಯಾ’ ಚಿತ್ರದ ರೀಷ್ಮಾ ನಾಣಯ್ಯ ಜೋಡಿಯಾಗಲಿದ್ದಾರೆ. ಈ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತವಿದ್ದು, ಪೊಗರು ನಂತ್ರ ಬಳಿಕ ನಿರ್ದೇಶಕ ನಂದ ಕಿಶೋರ್ ಹಾಗೂ ಚಂದನ್ ಶೆಟ್ಟಿ ಕಾಂಬೋ ರಾಣ ಚಿತ್ರದಲ್ಲೂ ಒಂದಾಗಿದೆ. ಶೇಖರ್ ಚಂದ್ರ ಈ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡುತ್ತಿದ್ದು, ಪ್ರಶಾಂತ್ ರಾಜಪ್ಪ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಇದೇ ತಿಂಗಳ ಕೊನೆ ವಾರದಲ್ಲಿ ರಾಣ ಚಿತ್ರದ ಶೂಟಿಂಗ್ ಶುರುವಾಗಲಿದೆ.
ಗುಜ್ಜಲ್ ಟಾಕೀಸ್ ಲಾಂಛನದಲ್ಲಿ ಗುಜ್ಜಲ್ ಪುರುಷೋತ್ತಮ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇವರು ಈ ಹಿಂದೆ ಕೆ.ಪಿ.ಶ್ರೀಕಾಂತ್ ನಿರ್ಮಾಣದ ಟಗರು ಚಿತ್ರದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಇದು ಅವರು ತಮ್ಮ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಮೊದಲ ಚಿತ್ರ ಇದಾಗಿದೆ.