ಜುಲೈ 12 ರಂದು ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಹುಟ್ಟುಹಬ್ಬ. ಆದರೆ ಈ ಬಾರಿ ಶಿವರಾಜ್ಕುಮಾರ್ ತಮ್ಮ ಬರ್ತ್ಡೇ ಆಚರಿಸಿಕೊಳ್ಳುತ್ತಿಲ್ಲ. ನನ್ನ ಹುಟ್ಟುಹಬ್ಬ ಆಚರಣೆಗಿಂತ ನಿಮ್ಮ ಆರೋಗ್ಯವೇ ಮುಖ್ಯ ಎಂದು ಶಿವಣ್ಣ ಅಭಿಮಾನಿಗಳಿಗೆ ಹೇಳಿದ್ದಾರೆ.
ಪ್ರತಿ ವರ್ಷ ಶಿವಣ್ಣ ಅಭಿಮಾನಿಗಳೊಂದಿಗೆ ತಮ್ಮ ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಕೊರೊನಾ ಭೀತಿ ಎಲ್ಲರ ಬರ್ತ್ಡೇ ಆಚರಣೆಗೆ ಅಡ್ಡಿಯುಂಟುಮಾಡಿದೆ. ಈ ಬಗ್ಗೆ ಮಾತನಾಡಿರುವ ಸೆಂಚುರಿ ಸ್ಟಾರ್, 'ಈ ಬಾರಿಯ ಹುಟ್ಟುಹಬ್ಬದಂದು ದಯವಿಟ್ಟು ಯಾರೂ ಮನೆ ಬಳಿ ಬರಬೇಡಿ. ಆ ದಿನ ನಾನು ಮನೆಯಲ್ಲಿ ಇರುವುದಿಲ್ಲ. ಹುಟ್ಟುಹಬ್ಬ ಆಚರಣೆಗೆ ನೀವು ಮನೆ ಬಳಿ ಬಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ನನ್ನ ಹುಟ್ಟುಹಬ್ಬ ಆಚರಣೆಗಿಂತ ನಿಮ್ಮ ಆರೋಗ್ಯ ನನಗೆ ಬಹಳ ಮುಖ್ಯ' ಎಂದಿದ್ದಾರೆ.
ಇನ್ನು 'ನೀವೆಲ್ಲರೂ ಆರೋಗ್ಯವಾಗಿದ್ದೀರಿ ಎಂದುಕೊಂಡಿದ್ದೇನೆ. ಕೊರೊನಾ ಬಗ್ಗೆ ಭಯ ಪಡುವ ಅಗತ್ಯ ಇಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ. ನೀವು ಜಾಗೃತರಾಗಿದ್ದರೆ ಯಾವ ಕೊರೊನಾ ಕೂಡಾ ನಿಮ್ಮನ್ನು ಏನೂ ಮಾಡುವುದಿಲ್ಲ. ನನ್ನ ನಿರ್ಧಾರದಿಂದ ನಿಮಗೆ ನೋವಾಗಿರಬಹುದು. ಆದರೆ ನನಗೂ ಬೇಸರ ಇದೆ. ಈ ಕೊರೊನಾ ಭೀತಿ ಕಡಿಮೆಯಾದ ನಂತರ ನಾವೆಲ್ಲರೂ ಭೇಟಿ ಆಗೋಣ' ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.