ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗ ಒಪ್ಪಿಕೊಂಡಿರುವ ಚಿತ್ರಗಳ ನಂತರ ಶಿವಣ್ಣ 'ಅಶ್ವತ್ಥಾಮ' ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಇದು ಶಿವಣ್ಣ ಅವರ 125ನೇ ಚಿತ್ರವಾಗಲಿದೆ. ಆದರೆ ಇದು ಮಹಾಭಾರತದಲ್ಲಿ ಬರುವ ಅಶ್ವತ್ಥಾಮನ ಕಥೆಯಲ್ಲ.
ಕಲಿಯುಗದ ಅಶ್ವತ್ಥಾಮ ಆಗಿ ಡಾ. ಶಿವರಾಜಕುಮಾರ್ ಸಮಾಜದಲ್ಲಿನ ಸಮಸ್ಯೆಗಳ ವಿರುದ್ಧ ಹೋರಾಡಲಿದ್ದಾರೆ. ಹಿಂದೆ ಇತರ ಚಿತ್ರಗಳಲ್ಲಿ ಕಾಣಿಸಿಕೊಳ್ಳದ ಲುಕ್ ಹಾಗೂ ಕ್ಯಾರೆಕ್ಟರ್ನಲ್ಲಿ ಶಿವಣ್ಣ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರದ ನಿರ್ದೇಶಕ ಸಚಿನ್ ರವಿ ಹೇಳಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ'ದಂತ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಅನುಭವ ಇರುವ ಸಚಿನ್ ರವಿ ಶಿವಣ್ಣನಿಗೆ ಕಥೆ ವಿವರಿಸಿದ್ದಾರಂತೆ.
ಆಗಿನ ಅಶ್ವತ್ಥಾಮ ಈಗ ಇದ್ದಿದ್ದರೆ ಏನೆಲ್ಲಾ ಆಗುತ್ತಿತ್ತು ಎಂಬುದನ್ನು ಸ್ಪೈ, ಥ್ರಿಲ್ಲರ್ ಶೈಲಿಯಲ್ಲಿ ಹೇಳಲಾಗುವುದು. ಈ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಬೆಂಬಲವಾಗಿ ನಿಂತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡಾ ಈಗ ಸುಮಾರು 6 ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ, ಇವೂ ಕೂಡಾ ಬಿಗ್ ಬಜೆಟ್ ಚಿತ್ರಗಳಂತೆ. ಶಿವಣ್ಣ ಇತರ ಚಿತ್ರಗಳಲ್ಲಿ ಬ್ಯುಸಿ ಇರುವುದರಿಂದ 'ಅಶ್ವತ್ಥಾಮ' ಚಿತ್ರವನ್ನು ಬಹುಶ: 2021 ಕೊನೆಯಲ್ಲಿ ಒಪ್ಪಿಕೊಳ್ಳಬಹುದು ಎನ್ನಲಾಗುತ್ತಿದೆ.