ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಚಿತ್ರರಂಗವೇ ಕೊರೊನಾಗೆ ತತ್ತರಿಸಿ ಹೋಗಿದೆ. ಎಂಟು ತಿಂಗಳ ಕಾಲ ಚಿತ್ರಮಂದಿರಗಳು ಮುಚ್ಚಿದ್ದರಿಂದ, ಥಿಯೇಟರ್ ಕಡೆ ಪ್ರೇಕ್ಷಕರು ಆಗಮಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಈ ಮಧ್ಯೆ ಕೊರೊನಾ ಮಾರ್ಗಸೂಚಿ ಅನ್ವಯ ಶೇ 50 ರಷ್ಟು ಜನರು ಸಿನಿಮಾ ಥಿಯೇಟರ್ಗೆ ಆಗಮಿಸಬಹುದು ಎಂದಿದೆ. ಇದರಿಂದ ಸಿನಿಮಾಗಳನ್ನು ರಿಲೀಸ್ ಮಾಡಿದ್ರೆ, ಹಾಕಿದ ಬಂಡವಾಳ ಹೇಗೆ ವಾಪಸ್ ಪಡೆಯುವುದು ಎಂಬ ಗೊಂದಲದಲ್ಲಿ ನಿರ್ಮಾಪಕರಿದ್ದಾರೆ.
ಈ ಹಿನ್ನೆಲೆಯಲ್ಲಿ ಯುವರತ್ನ, ಕೋಟಿಗೊಬ್ಬ 3, ರಾಬರ್ಟ್, ಫ್ಯಾಂಟಮ್, ಪೊಗರು, ಸಲಗ ಸಿನಿಮಾಗಳ ನಿರ್ಮಾಪಕರಾದ ಜಾಕ್ ಮಂಜು, ಉಮಾಪತಿ ಶ್ರೀನಿವಾಸ್, ಗಂಗಾಧರ್, ಸೂರಪ್ಪ ಬಾಬು, ಕೆ.ಪಿ ಶ್ರೀಕಾಂತ್ ಸೇರಿ, ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರ್ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚೆ ಮಾಡಿದ್ದಾರೆ.
ಈ ಚರ್ಚೆಯಲ್ಲಿ ಚಿತ್ರಮಂದಿರಕ್ಕೆ ಜನ ಬರುತ್ತಿಲ್ಲ ಎಂಬ ಕಾರಣಕ್ಕೆ ಒಟಿಟಿಗೆ ಹೋದ್ರೆ ಅಲ್ಲಿ ಹಾಕಿದ ಬಂಡವಾಳ ವಾಪಸ್ ಬರುತ್ತಾ? ಇದರಿಂದ ಸ್ಟಾರ್ ನಟರ ಚಿತ್ರಗಳನ್ನೇ ನಂಬಿಕೊಂಡಿರುವ ಥಿಯೇಟರ್ ಮಾಲೀಕರ ಪರಿಸ್ಥಿತಿ ಏನು? ಕೊರೊನಾದಿಂದ ಸಂಕಷ್ಟದಲ್ಲಿರುವ ಎಲ್ಲರ ಹಿತದೃಷ್ಟಿ ಕಾಯುವುದು ಹೇಗೆ ಎಂಬ ಪ್ರಮುಖ ವಿಚಾರಗಳು ಚರ್ಚೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಹಾಗೆಯೇ ಸಿನಿಮಾ ಬಿಡುಗಡೆ ಮಾಡಿದ್ರೆ ಥಿಯೇಟರ್ ಸಮಸ್ಯೆ, ಕಲೆಕ್ಷನ್ ಸಮಸ್ಯೆ ಎದುರಾಗಬಹುದು ಎಂಬ ಆತಂಕ ಇದೆ. ಹಾಗಾಗಿ, ಚಿತ್ರಗಳ ನಡುವೆ ಕ್ಲಾಶ್ ಆಗಬಾರದು ಎಂಬ ವಿಷಯವನ್ನು ಮುಖ್ಯವಾಗಿ ಚರ್ಚೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಸಿನಿಮಾ ಏಪ್ರಿಲ್ನಲ್ಲಿ ರಿಲೀಸ್ ಆಗೋದಿಕ್ಕೆ ರೆಡಿಯಾಗಿದೆ. ಈ ಹಿನ್ನೆಲೆಯಲ್ಲಿ ಸುದೀಪ್, ದುನಿಯಾ ವಿಜಯ್, ದರ್ಶನ್ ಹಾಗೂ ಧ್ರುವ ಸರ್ಜಾ ಚಿತ್ರಗಳ ನಿರ್ಮಾಪಕರು ಒಟ್ಟಾಗಿ ಸೇರಿ ಚರ್ಚೆ ಮಾಡಿದ್ದಾರೆ.