ಪ್ರತಿವರ್ಷ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸಲಾಗುತ್ತದೆ. ನಾಳೆ 5ನೇ ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಇದರ ಆಚರಣೆಗೆ ಎದುರು ನೋಡುತ್ತಿದೆ. ಚಂದನವನ ಕೂಡಾ ನಾಳಿನ ಆಚರಣೆಗೆ ಸಜ್ಜಾಗುತ್ತಿದೆ.
![dr raj](https://etvbharatimages.akamaized.net/etvbharat/prod-images/dr-rajakumar-yoga-posture1560997624846-2_2006email_1560997636_796.jpg)
![anita](https://etvbharatimages.akamaized.net/etvbharat/prod-images/anitha-bhat-in-yoga-posture-11560997624847-19_2006email_1560997636_819.jpg)
ಡಾ. ರಾಜ್ಕುಮಾರ್ ಅಭಿನಯದ 1983 ರಲ್ಲಿ ಬಿಡುಗಡೆಯಾದ ‘ಕಾಮನಬಿಲ್ಲು‘ ಸಿನಿಮಾದಲ್ಲಿ ಅಣ್ಣಾವ್ರ ಯೋಗ ಪ್ರದರ್ಶನ ತೋರಿಸಲಾಗಿತ್ತು. ಚಿತ್ರದ ಟೈಟಲ್ ಕಾರ್ಡಿನಲ್ಲಿ ರಾಜ್ ಅವರ ವಿಶೇಷ ಯೋಗ ಭಂಗಿಗಳನ್ನು ಪ್ರದರ್ಶನ ಮಾಡಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿ ಹೆಚ್.ಪಿ. ರಾಯ್ಕರ್ ಅವರಿಂದ ಡಾ. ರಾಜ್ಕುಮಾರ್ ಯೋಗದ ಬಗ್ಗೆ ಪ್ರಭಾವಿತರಾಗಿದ್ದರು. 50 ವರ್ಷ ದಾಟಿದ ಮೇಲೆ ಡಾ.ರಾಜ್ ಅವರನ್ನು ಹೆಚ್.ಪಿ. ರಾಯ್ಕರ್ ಯೋಗ ಮಾಡಲು ಪ್ರೇರೇಪಿಸಿದರು. ನಂತರ ಪಾರ್ವತಮ್ಮ ರಾಜಕುಮಾರ್ ಕೂಡಾ ಯೋಗದ ಬಗ್ಗೆ ಆಸಕ್ತಿ ತೋರಿದರು.
![ragini](https://etvbharatimages.akamaized.net/etvbharat/prod-images/ragini-doing-yoga-21560997624850-37_2006email_1560997636_561.jpg)
![sanjana](https://etvbharatimages.akamaized.net/etvbharat/prod-images/sanjana-yoga-posture-11560997624848-81_2006email_1560997636_355.jpg)
ನಟಿಯರಾದ ಸಂಜನಾ ಗಲ್ರಾಣಿ, ಅನಿತಾ ಭಟ್, ರಾಗಿಣಿ ದ್ವಿವೇದಿ, ಮಮತಾ ರಾಹುತ್ ಹಾಗೂ ಇನ್ನಿತರರು ಯೋಗವನ್ನು ತಮ್ಮ ಪ್ರತಿದಿನದ ಚಟುವಟಿಕೆಯನ್ನಾಗಿ ಮಾಡಿಕೊಂಡಿದ್ದಾರೆ. ಸಂಜನಾ ಬೆಂಗಳೂರಿನ ಕೋರಮಂಗಲದಲ್ಲಿ ‘ಪವರ್ ಯೋಗ‘ ಸಂಸ್ಥೆ ನಡೆಸುತ್ತಿದ್ದಾರೆ. ‘ಸೈಕೋ‘ ಚಿತ್ರ ಖ್ಯಾತಿಯ ಅನಿತಾಭಟ್ ಕೂಡಾ ಯೋಗಶಾಲೆ ಆರಂಭಿಸಿದ್ದು ಸಾಕಷ್ಟು ವಿದ್ಯಾರ್ಥಿಗಳು ಇದರಿಂದ ಪ್ರಯೋಜನ ಪಡೆದಿದ್ದಾರೆ. ರಾಗಿಣಿ ಕೂಡಾ ಯೋಗ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ನಟ ಕೋಮಲ್ ಕೂಡಾ ಬಹಳ ದಿನಗಳ ನಂತರ ಮತ್ತೆ ಸ್ಯಾಂಡಲ್ವುಡ್ಗೆ ಬಂದಿದ್ದು ತೂಕ ತಗ್ಗಿಸಿಕೊಳ್ಳಲು ನನಗೆ ಯೋಗ ಬಹಳ ಸಹಾಯಕವಾಯ್ತು ಎನ್ನುತ್ತಾರೆ.
![mamta](https://etvbharatimages.akamaized.net/etvbharat/prod-images/3609213_mamta.jpg)
ಯೋಗ ದಿನಕ್ಕೆ ಕೇಂದ್ರ ಸರ್ಕಾರದಿಂದ ಕೂಡಾ ಹೆಚ್ಚು ಮಹತ್ವ ಸಿಕ್ಕಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡಾ ಯೋಗ ಪಟು. ನಾಳೆ ಬೆಂಗಳೂರು ಮಹಾನಗರದಲ್ಲಿ ಸುಮಾರು 10 ಕಡೆ ಸಾಮೂಹಿಕ ಯೋಗ ಪ್ರದರ್ಶನ ನಡೆಯುತ್ತಿದ್ದು ಸಾಕಷ್ಟು ಸಿನಿಮಾ ನಟರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.