ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ್ ಟ್ರ್ಯಾಕ್ಟರ್ ಓಡಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಬೆಣ್ಣೆ ನಗರಿ ಸುಂದರಿ ಅದಿತಿ ಪ್ರಭುದೇವ್ ಕಿರುತೆರೆಯಿಂದ ಕೆರಿಯರ್ ಶುರು ಮಾಡಿ, ಸದ್ಯ ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ನಟಿಯಾಗಿ ಹೊರ ಹೊಮ್ಮಿದ್ದಾರೆ.
ತೋತಾಪುರಿ, ಓಲ್ಡ್ ಮಾಂಕ್, ಒಂಬತ್ತನೇ ದಿಕ್ಕು, ತ್ರಿಬಲ್ ರೈಡಿಂಗ್, ಅದೊಂದಿತ್ತು ಕಾಲ ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಆದಿತಿ ಪ್ರಭುದೇವ್ ತಾನು ಬೆಳೆದು ಬಂದ ಜೀವನವನ್ನ ಮರೆತ್ತಿಲ್ಲ. ಕೆಲವು ದಿನಗಳ ಹಿಂದೆ ಅದಿತಿ ಪ್ರಭುದೇವ ತಮ್ಮ ಹುಟ್ಟೂರಾದ ದಾವಣಗೆರೆ ಮನೆಯಲ್ಲಿ, ಹಸುಗಳಿಗೆ ಮೇವು ಹಾಕಿ, ಹಾಲು ಕರೆದು, ಸಗಣಿಯನ್ನ ಬಾಚಿ ಗಮನ ಸೆಳೆದಿದ್ದರು. ಇದೀಗ ಅದಿತಿ ಟ್ರ್ಯಾಕ್ಟರ್ ಏರಿ ಬಿತ್ತನೆ ಮಾಡಿದ್ದಾರೆ.
ಹಾಗೇ ನೇಗಿಲು ಹಿಡಿದು ಉಳುಮೆ ಮಾಡಿದ್ದಾರೆ. ಈ ವಿಡಿಯೋವನ್ನು ಆದಿತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ನಾನು ಹಳ್ಳಿಯ ಹೆಣ್ಣು ಮಗಳಾದರೂ, ರೈತ ಕುಟುಂಬದ ಹಿನ್ನೆಲೆ ಇದ್ದರೂ, ಈಗಿರುವ ಪರಿಸ್ಥಿತಿಯಲ್ಲಿ ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರವಾಗಲಿ, ಕೆಲಸವಾಗಲಿ, ದಿನಚರಿಯಾಗಲಿ ವಿಭಿನ್ನವಾಗಿ ಇರಬಹುದು. ಆದರೂ ಪ್ರತಿಸಲ ನಾನು ಯಾವುದೇ ಹಳ್ಳಿಗೆ ಹೋದರೂ ಇರುವ ಒಂದೆರಡು ದಿನಗಳಾದರೂ ಅಲ್ಲಿಯ ವಾತಾವರಣವನ್ನು ಪ್ರೀತಿಯಿಂದ ಅನುಭವಿಸುತ್ತೇನೆ ಎಂದು ಅದಿತಿ ಪ್ರಭುದೇವ ಹೇಳಿದ್ದಾರೆ.
ರೈತರು, ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಿದ್ದರೂ, ಮೈತುಂಬಾ ಸಾಲವಿದ್ದರೂ ನಿತ್ಯ ಕಷ್ಟಪಟ್ಟು ಕೆಲಸ ಮಾಡಿ ನಮ್ಮೆಲ್ಲರಿಗೂ ಅನ್ನ ನೀಡುತ್ತಿರುವ ದೇವರು. ಆದ್ದರಿಂದ ರೈತನಿಗೆ ಈ ಮೂಲಕ ನಮನ ಅಂದಿದ್ದಾರೆ. ಅಷ್ಟೆ ಅಲ್ಲಾ ಪ್ರತಿಯೊಬ್ಬ ರೈತ ಮಿತ್ರರಿಗೆ ಅದಿತಿ ಪ್ರಭುದೇವ ಒಂದು ಪತ್ರ ಬರೆದಿದ್ದಾರೆ. ಆದಿತಿ ಪ್ರಭುದೇವ್ ಹೊಲದಲ್ಲಿ ಹಳ್ಳಿ ಹೆಣ್ಣು ಮಗಳಾಗಿ ಕೆಲಸ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.