ಜೀವದ ಹಂಗು ತೊರೆದು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಶುಶ್ರೂಷಕಿಯರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ವೈದ್ಯರು ಕೂಡ ಪೊಲೀಸರಿಗೆ ಮನವಿ ಸಲ್ಲಿಸುತ್ತಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಹಲ್ಲೆಗಳು ನಿಲ್ಲುತ್ತಿಲ್ಲ. ಹಲ್ಲೆಗಳು ಹೆಚ್ಚುತ್ತಿರುವುದು ವರದಿಯಾಗುತ್ತಲೇ ಇದೆ. ಹೀಗಾಗಿ, ಸ್ಯಾಂಡಲ್’ವುಡ್’ನ ಖ್ಯಾತ ನಟಿ ಅದಿತಿ ಪ್ರಭುದೇವ ಕೂಡ ವೈದ್ಯರ ಮೇಲೆ ಹಲ್ಲೆ ನಡೆಸದಂತೆ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿರುವ ನಟಿ,'ಕೊರೊನಾ ವಾರಿಯರ್ಸ್’ಗೆ ವಿಶೇಷವಾಗಿ ವೈದ್ಯರಿಗೆ ತುಂಬು ಹೃದಯದ ಧನ್ಯವಾದಗಳನ್ನು ಹೇಳಲು ಇಷ್ಟಪಡುತ್ತೇನೆ. ಪ್ರತಿನಿತ್ಯ ಸಾವುಗಳನ್ನು ನೋಡುತ್ತಾ, ಕುಟುಂಬದಿಂದ ದೂರವಾಗಿ ವೈದ್ಯರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾವೆಲ್ಲರೂ ಅವರ ತ್ಯಾಗವನ್ನು ಗೌರವಿಸಬೇಕು. ಆದರೆ, ಜನರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವ ಭಯದಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ.
ಈ ಸಮಯದಲ್ಲಿ ನಾವು ಆಲೋಚನೆ ಮಾಡಬೇಕು, ಸಮಾಧಾನದಿಂದ ಇರಬೇಕು. ಆಗ ಎಲ್ಲರಿಗೂ ಒಳ್ಳೆಯದಾಗುತ್ತದೆ. ಹೆದರಿಕೆ ಬೇಡ, ಒಬ್ಬರಿಗೊಬ್ಬರು ಸಪೋರ್ಟಿವ್ ಆಗಿರೋಣ ಎಂದು ಅದಿತಿ ಪ್ರಭುದೇವ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ನಟಿಯರಾದ ರೂಪಿಕಾ, ದೀಪಿಕಾ ಕೂಡ ವೈದ್ಯರ ಮೇಲೆ ಹಲ್ಲೆ ನಡೆಸದಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದರು.