ಬೆಳ್ಳಿತೆರೆ ಮೇಲೆ ನಕ್ಷತ್ರಗಳಂತೆ ಮಿಂಚುವ ಸ್ಟಾರ್ಗಳು ನಿಜ ಜೀವನದಲ್ಲೂ ರಿಯಲ್ ನಟರಾಗಿರಬೇಕು ಅನ್ನೋದು ಅಭಿಮಾನಿಗಳ ಅಭಿಲಾಷೆ. ಈ ಮಾತಿಗೆ ನಟ ಸಂಚಾರಿ ವಿಜಯ್ ಹೊರತಾಗಿರಲಿಲ್ಲ. ಕೊರೊನಾ ಸಮಯದಲ್ಲಿ ಸಾವಿರಾರು ಜನರ ಹಸಿವು ನೀಗಿಸುವ ಸಲುವಾಗಿ ತಮ್ಮ ಸ್ವಂತ ಕಾರು ಮಾರುವ ಮೂಲಕ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದ ಹೀರೋ ಆಗಿ ಉಳಿದಿದ್ದಾರೆ. ಅಪಘಾತಕ್ಕೀಡಾಗಿ ಸಾವಿನೊಂದಿಗೆ ಹೋರಾಟ ನಡೆಸುತ್ತಿರುವ ಸಂಚಾರಿ ವಿಜಯ್ ಅವರ ಸಹಾಯ ನೆನೆದು ಹಲವರು ಭಾರವಾದ ಹೃದಯದಿಂದ ಕಣ್ಣೀರು ಸುರಿಸುತ್ತಿದ್ದಾರೆ.
ಇದನ್ನೂ ಓದಿ: 'ಸಂಚಾರಿ ವಿಜಯ್ ಉಸಿರಾಡುತ್ತಿದ್ದಾರೆ' - ಹೆಲ್ತ್ ಬುಲೆಟಿನ್ ಬಿಡುಗಡೆ
ಆಸ್ಪತ್ರೆಯಿಂದ ಸಂಚಾರಿ ವಿಜಯ್ ನಿಧನದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಸದ್ಯ ಆಸ್ಪತ್ರೆಯಲ್ಲಿರುವ ನಟ ಸಂಚಾರಿ ವಿಜಯ್ ಅವರ ಮೆದುಳು ನಿಷ್ಕ್ರಿಯಗೊಂಡಿದ್ದು, ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಆಸ್ಪತ್ರೆಯ ವೈದ್ಯರು ಹೆಲ್ತ್ ಬುಲೆಟಿನ್ನಲ್ಲಿ ಮಾಹಿತಿ ನೀಡಿದ್ದಾರೆ. ಅವರ ಅಪಘಾತದ ಸುದ್ದಿ ಕೇಳಿ ಸ್ಯಾಂಡಲ್ವುಡ್ ಆಘಾತ ವ್ಯಕ್ತಪಡಿಸಿದೆ.
ಮನೋಜ್ಞ ಅಭಿನಯದ ಮೂಲಕ ಚಂದವನದಲ್ಲಿ ಗಮನ ಸೆಳೆದ ಸಂಚಾರಿ ವಿಜಯ್ ಸ್ಯಾಂಡಲ್ವುಡ್ನಲ್ಲಿ ಬಹುಬೇಡಿಕೆ ನಟರಾಗಿದ್ದರು. ಹಾಗಾಗಿ ಸಾಲು ಸಾಲು ಚಿತ್ರಗಳು ಅವರನ್ನು ಹುಡುಕಿಕೊಂಡು ಬರುತ್ತಿದ್ದವು. ಸಂಚಾರಿ ವಿಜಯ್ ನಟಿಸುತ್ತಿದ್ದ ಸಿನಿಮಾಗಳ ಸಂಖ್ಯೆ ಕೇಳಿದರೆ ನಿಮಗೆ ಅಚ್ಚರಿ ತರಿಸಬಹುದು. ಅಷ್ಟು ಸಿನಿಮಾಗಳು ಅವರ ಅಕೌಂಟ್ನಲ್ಲಿ ಜಮೆ ಆಗಿದ್ದವು.
ಸಂಚಾರಿ ವಿಜಯ್ ಹೀರೋ ಎನ್ನುವುದಕ್ಕಿಂತ ಒಬ್ಬ ಅದ್ಭುತ ನಟ. ಯಾಕಂದ್ರೆ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದ ಪಾತ್ರಗಳು, ಆತನನ್ನು ಹುಡುಕಿ ಬರುತ್ತಿದ್ದ ಪಾತ್ರಗಳು ವಿಭಿನ್ನ ಹಾಗೂ ವಿಶಿಷ್ಟವಾಗಿರುತ್ತಿದ್ದವು. ಈ ಸಾಲಿನಲ್ಲಿ 'ತಲೆದಂಡ' ಸಿನಿಮಾ ಮುಂಚೂಣಿಯಲ್ಲಿದೆ.
ನಿರ್ದೇಶಕ ಕೃಪಾಕರ್ ತಯಾರು ಮಾಡಿರುವ 'ತಲೆದಂಡ' ಚಿತ್ರದಲ್ಲಿ ಸಂಚಾರಿ ವಿಜಯ್ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಈ ವರ್ಷ ನಡೆಯಬೇಕಿದ್ದ ಬೆಂಗಳೂರು ಚಲನಚಿತ್ರೋತ್ಸವದಲ್ಲಿ 'ತಲೆದಂಡ' ಚಿತ್ರವನ್ನು ಸ್ಪರ್ಧಾ ವಿಭಾಗಕ್ಕೆ ಆಯ್ಕೆ ಮಾಡಿಲ್ಲ ಎಂದು ಸಂಚಾರಿ ವಿಜಯ್, ನಿರ್ದೇಶಕ ಕೃಪಾಕರ್ ಇಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಸಂಚಾರಿ ವಿಜಯ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ತಲೆದಂಡ' ಸಿನಿಮಾ ರಿಲೀಸ್ ಆಗಬೇಕಿದೆ.
'ಮೇಲೊಬ್ಬ ಮಾಯಾವಿ' ವಿಭಿನ್ನ ಅವತಾರದಲ್ಲಿ ಸಂಚಾರಿ ವಿಜಯ್ ಅಭಿನಯಿಸಿರುವ ಮತ್ತೊಂದು ಸಿನಿಮಾ. ಬಿಡುಗಡೆಗೆ ಸಜ್ಜಾಗಿರೋ ಈ ಚಿತ್ರಕ್ಕೆ ಸಂಚಾರಿ ವಿಜಯ್ ಡಬ್ಬಿಂಗ್ ಕೂಡ ಮುಗಿಸಿದ್ದು ವಿಶೇಷ. ಪತ್ರಕರ್ತರಾದ ಬಿ.ನವೀನ್ ಕೃಷ್ಣ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ಚಕ್ರವರ್ತಿ ಚಂದ್ರಚೂಡ್ ಅವರ ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯವಿದೆ.
ಇನ್ನು ಕಳೆದ ವರ್ಷ ಸಂಚಾರಿ ವಿಜಯ್ 'ಅವಸ್ಥಾಂತರ' ಎಂಬ ಸಿನಿಮಾ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದರು. ಜಿ ದೀಪಕ್ ಕುಮಾರ್ ನಿರ್ದೇಶನದಲ್ಲಿ ಸಂಚಾರಿ ವಿಜಯ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ರಂಜನಿ ರಾಘವನ್, ದಿಶಾ ಕೃಷ್ಣಯ್ಯ ನಾಯಕಿಯಾಗಿದ್ದರು. 'ಅವಸ್ಥಾಂತರ' ಚಿತ್ರ ಸ್ವಲ್ಪ ದಿನಗಳು ಮಾತ್ರ ಚಿತ್ರೀಕರಣ ಮಾಡಲಾಗಿದೆ.
'ಪುಕ್ಸಟ್ಟೆ ಲೈಫು' ಸಂಚಾರಿ ವಿಜಯ್ ಅಭಿನಯಿಸಿರುವ ಮತ್ತೊಂದು ಸಿನಿಮಾ. ಈ ಚಿತ್ರದಲ್ಲಿ ವಿಜಯ್ ಬಹಳ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು. ಅಚ್ಚುತ್ ಕುಮಾರ್, ರಂಗಾಯಣ ರಘು, ಮಾತಂಗಿ ಎನ್ ಪ್ರಸನ್ ಸಹ ನಟಿಸಿದ್ದರು. ರಂಗಭೂಮಿ ಹಾಗೂ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ಅರವಿಂದ್ ಕುಪ್ಲಿಕರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ.
ಇನ್ನು ಲೂಸ್ ಮಾದ ಯೋಗಿ ಜೊತೆ, ಮೊದಲ ಬಾರಿಗೆ ಸಂಚಾರಿ ವಿಜಯ್ ಸ್ಕ್ರೀನ್ ಹಂಚಿಕೊಳ್ಳುತ್ತಿರುವ ಚಿತ್ರ 'ಲಂಕೆ'. ಈ ಸಿನಿಮಾವನ್ನ ಎಂ.ಡಿ ರಾಮು ಪ್ರಸಾದ್ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದ ಟೈಟಲ್ ಲಾಂಚ್ ಅನ್ನ ಬಹಳ ಗ್ರ್ಯಾಂಡ್ ಆಗಿ ಮಾಡಲಾಯಿತ್ತು. ಈ ಚಿತ್ರದಲ್ಲಿಯೂ ಕೂಡ ಸಂಚಾರಿ ವಿಜಯ್ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: "ವಿಜಯ್ ಬದುಕುವ ಸಾಧ್ಯತೆ ಕಡಿಮೆ, ಅಂಗಾಂಗ ದಾನಕ್ಕೆ ಕುಟುಂಬಸ್ಥರ ನಿರ್ಧಾರ"
ಇನ್ನು ಜನಾರ್ಧನ್ ಪಿ ಜಾನಿ ನಿರ್ದೇಶನದಲ್ಲಿ ತಯಾರಾಗುತ್ತಿದ್ದ 'ಪಿರಂಗಿಪುರ' ಸಿನಿಮಾ ಸಂಚಾರಿ ವಿಜಯ್ ವೃತ್ತಿ ಜೀವನದಲ್ಲಿ ಬಹಳ ವಿಶೇಷವಾಗಿತ್ತು. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂನಲ್ಲಿ ಚಿತ್ರ ತಯಾರಾಗಲಿದ್ದು 25 ಕೋಟಿ ಬಜೆಟ್ ಎಂದು ಸುದ್ದಿಯಾಗಿತ್ತು. ಈ ಸಿನಿಮಾ ಕೂಡ ಇನ್ನು ತೆರೆಗೆ ಬಂದಿಲ್ಲ. ಕಳೆದ ನಾಲ್ಕು ವರ್ಷದಿಂದ ಈ ಪ್ರಾಜೆಕ್ಟ್ ಚರ್ಚೆಯಲ್ಲಿದೆ. ಅಪಘಾತಕ್ಕೀಡಾಗಿ ಸಾವಿನೊಂದಿಗೆ ಹೋರಾಟ ನಡೆಸುತ್ತಿರುವ ಸಂಚಾರಿ ವಿಜಯ್ ಅವರ ಅಭಿನಯ ಹುಡುಕಿಕೊಂಡು ಬಂದ ಸಾಲು ಸಾಲು ಸಿನಿಮಾಗಳಿವು.