ಲಾಕ್ಡೌನ್ ತೆರವಾದ ನಂತರ ಬೇರೆಲ್ಲ ನಟರು ಹೊಸ ಚಿತ್ರಗಳಲ್ಲಿ ಬ್ಯುಸಿಯಾದರೆ, ಸಂಚಾರಿ ವಿಜಯ್ ಮಾತ್ರ ಏಕೋ ಯಾವ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಇದೀಗ ಅವರು 'ಅವಸ್ಥಾಂತರ' ಎಂಬ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಮುಹೂರ್ತ ಕೂಡಾ ಇತ್ತೀಚೆಗೆ ನಡೆದಿದೆ. ಈ ಚಿತ್ರದಲ್ಲಿ ಅವರಿಗೆ ನಾಯಕಿಯಾಗಿ 'ಕನ್ನಡತಿ' ಖ್ಯಾತಿಯ ರಂಜನಿ ರಾಘವನ್ ನಟಿಸುತ್ತಿದ್ದಾರೆ.
'ಅವಸ್ಥಾಂತರ' ಎಂಬ ಹೆಸರು ಕೇಳುತ್ತಿದ್ದಂತೆಯೇ ಇದ್ಯಾವುದೋ ಗಹನವಾದ ಸಾಮಾಜಿಕ ವಿಷಯದ ಬಗ್ಗೆ ಚರ್ಚಿಸುವ ಸಿನಿಮಾ ಎಂದೆನಿಸಬಹುದು. ಆದರೆ ಇದೊಂದು ಲವ್ಸ್ಟೋರಿ ಇರುವ ಚಿತ್ರವಂತೆ. ಇಲ್ಲಿ ನಾಯಕ ಸಾಂಪ್ರದಾಯಿಕ ಕುಟುಂಬದಿಂದ ಬಂದವನು. ಮೇಲಾಗಿ ಸಾಕಷ್ಟು ವಯಸ್ಸಾಗಿದೆ. ಹೆಣ್ಣಿನ ಸಂಪರ್ಕವೇ ಇಲ್ಲದ ಆತ ಏನೆಲ್ಲಾ ಅವಾಂತರಗಳನ್ನು ಮಾಡಿಕೊಳ್ಳುತ್ತಾನೆ ಎಂಬುದನ್ನು ಚಿತ್ರದಲ್ಲಿ ಹಾಸ್ಯಮಯವಾಗಿ ತೋರಿಸಲಾಗುವುದಂತೆ.ಇದೊಂದು ಅದ್ಭುತ ಕಥೆ ಎನ್ನುವುದಕ್ಕಿಂತ ಸನ್ನಿವೇಶಗಳು ಹೇಗೆಲ್ಲಾ ಫಜೀತಿ ಹುಟ್ಟುಹಾಕುತ್ತದೆ ಎಂಬುದನ್ನು ಕಾಮಿಡಿಯಾಗಿ ತೋರಿಸಲಾಗುತ್ತದೆ.
ಅವಸ್ಥೆ ಹಾಗೂ ಅವಾಂತರ ಜೊತೆಯಾದರೆ ಅವಸ್ಥಾಂತರವಾಗುತ್ತದೆ. ಅದೇ ರೀತಿ ಇಲ್ಲಿ ಅವಸ್ಥೆ ಮತ್ತು ಅವಾಂತರಗಳೆರೆಡೂ ಸೇರೆ ಏನೆಲ್ಲಾ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ' ಎನ್ನುತ್ತಾರೆ ಸಂಚಾರಿ ವಿಜಯ್. 'ಎದ್ದೇಳು ಮಂಜುನಾಥ' ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ದೀಪಕ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸ್ವತಂತ್ರ್ಯವಾಗಿ ನಿರ್ದೇಶನಕ್ಕಿಳಿದಿದ್ದಾರೆ. ಸುಮಾರು 3 ವರ್ಷಗಳ ಹಿಂದೆಯೇ ಅವರು ಈ ಚಿತ್ರವನ್ನು ಆರಂಭಿಸಬೇಕು ಎಂದಿದ್ದರು. ಆದರೆ ಕಾರಣಾಂತರಗಳಿಂದ ಚಿತ್ರ ತಡವಾಗಿದ್ದು ಕೊನೆಗೂ ಚಿತ್ರ ಪ್ರಾರಂಭವಾಗಿದೆ. ಚಿತ್ರಕ್ಕೆ ನಂದಕಿಶೋರ್ ಛಾಯಾಗ್ರಹಣ ಮಾಡಿದರೆ, ಭರತ್ ಬಿ.ಜೆ. ಸಂಗೀತ ಸಂಯೋಜಿಸುತ್ತಿದ್ದಾರೆ.